ಮನೆ ರಾಜಕೀಯ ಬೊಮ್ಮಾಯಿ ಅವರ ಸಲಹೆ ಪಾಲಿಸಿದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ: ಡಿ.ಕೆ ಶಿವಕುಮಾರ್

ಬೊಮ್ಮಾಯಿ ಅವರ ಸಲಹೆ ಪಾಲಿಸಿದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ: ಡಿ.ಕೆ ಶಿವಕುಮಾರ್

0

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸದೆ ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಬೇಕು ಎಂಬ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಅವರ ಸಲಹೆ ಪಾಲಿಸಿದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು ‘ರಾಜ್ಯದಲ್ಲೇ ನೀರಿನ ಕೊರತೆ ಇರುವಾಗ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಎಂಬುದು ನಮ್ಮ ನಿಲುವು. ಅದೇ ವಾದವನ್ನು ಸುಪ್ರೀಂ ಕೋರ್ಟ್ ನಲ್ಲೂ ಮಂಡಿಸಲಾಗುವುದು. ಆದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಕರ್ನಾಟಕ ಉಲ್ಲಂಘಿಸಿದೆ ಎಂದು ನ್ಯಾಯಾಲಯ ಹೇಳಿದರೆ ಬೊಮ್ಮಾಯಿ ಅಥವಾ ನನ್ನ ಬಳಿ ಯಾವ ಉತ್ತರ ಇದೆ’ ಎಂದು ಪ್ರಶ್ನಿಸಿದರು.

‘ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವ ಆಗಿದ್ದಾಗ ತಮಿಳುನಾಡಿಗೆ ಎಷ್ಟು ನೀರು ಹರಿಸಲಾಗಿತ್ತು ಎಂಬ ಅಂಕಿ ಅಂಶಗಳು ಇವೆ. ಈಗ ಅವರು ಪ್ರಧಾನಿ ನರೇಂದ್ರ ಮೋದಿಯವರ ಮನವೊಲಿಸಲಿ ಸಮಸ್ಯೆ ಪರಿಹಾರಕ್ಕೆ ಸಹಕಾರ ನೀಡಲಿ’ ಎಂದರು.

“ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆಯನ್ನು ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು ಎಂಬ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಸಲಹೆ ಉತ್ತಮವಾದದು. ತಮ್ಮ ಸುಧೀರ್ಘ ಅನುಭವದ ಆಧಾರದಲ್ಲಿ ಅವರು ಈ ಸಲಹೆ ನೀಡಿದ್ದಾರೆ” ಎಂದು ಹೇಳಿದರು.