ಮನೆ ರಾಷ್ಟ್ರೀಯ ಪ್ರಧಾನಿ ಮೋದಿಗೆ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ

ಪ್ರಧಾನಿ ಮೋದಿಗೆ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ

0

ಮುಂಬೈ (Mumbai)-ಪ್ರಧಾನಿ (PM) ಮೋದಿ (Modi)ಯವರಿಗೆ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ (Lata Deenanath Mangeshkar Award)ನೀಡಿ ಗೌರವಿಸಲಾಗಿದೆ.

ಮುಂಬೈನಲ್ಲಿ ನಡೆದ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಈ ವೇಳೆ ಮಾತನಾಡಿದ ಅವರು, ಸಂಗೀತವು ಮಾತೃತ್ವ ಮತ್ತು ಪ್ರೀತಿಯ ಭಾವನೆಯನ್ನು ನೀಡುತ್ತದೆ. ಸಂಗೀತವು ನಿಮ್ಮನ್ನು ದೇಶಭಕ್ತಿ ಮತ್ತು ಕರ್ತವ್ಯದ ಪರಾಕಾಷ್ಠೆಗೆ ಕೊಂಡೊಯ್ಯಬಹುದು. ಈ ಸಂಗೀತದ ಶಕ್ತಿಯನ್ನು ಲತಾ ದೀದಿಯ ರೂಪದಲ್ಲಿ ಕಂಡ ನಾವೆಲ್ಲರೂ ಅದೃಷ್ಟವಂತರು ಎಂದರು.

ಲತಾ ದೀದಿ ನನ್ನ ದೊಡ್ಡ ಅಕ್ಕ. ತಲೆಮಾರುಗಳಿಗೆ ಪ್ರೀತಿ ಮತ್ತು ಭಾವನೆಯನ್ನು ಉಡುಗೊರೆಯಾಗಿ ನೀಡಿದ ಲತಾ ದೀದಿಯಿಂದ ನಾನು ಯಾವಾಗಲೂ ಅಪಾರ ಪ್ರೀತಿ ಪಡೆದಿದ್ದೇನೆ. ಇದಕ್ಕಿಂತ ಹೆಚ್ಚಿನ ಭಾಗ್ಯ ಬೇರೇನಿದೆ? ಹಲವು ದಶಕಗಳ ನಂತರ ದೀದಿ ಇಲ್ಲದ ಮೊದಲ ರಾಖಿ ಹಬ್ಬ ಬರಲಿದೆ ಎಂದು ಲತಾ ಜೀ ಅವರನ್ನು ಸ್ಮರಿಸಿಕೊಂಡರು. ಲತಾ ದೀದಿ ಅವರಂತಹ ಅಕ್ಕನ ಹೆಸರಿನಲ್ಲಿ ಪ್ರಶಸ್ತಿ ಬಂದಾಗ ನನಗೆ ಅದು ಅವರ ಆತ್ಮೀಯತೆ ಮತ್ತು ಪ್ರೀತಿಯ ಸಂಕೇತವಾಗಿದೆ. ನಾನು ಈ ಪ್ರಶಸ್ತಿಯನ್ನು ಎಲ್ಲಾ ದೇಶವಾಸಿಗಳಿಗೆ ಅರ್ಪಿಸುತ್ತೇನೆ. ಲತಾ ದೀದಿ ಜನರಿಗೆ ಸೇರಿದ ಹಾಗೆ ಅವರ ಹೆಸರಿನಲ್ಲಿ ನನಗೆ ನೀಡಿರುವ ಈ ಪ್ರಶಸ್ತಿ ಜನತೆಗೆ ಸೇರಿದ್ದು ಎಂದರು.

ಲತಾ ದೀದಿ ಅವರು ಸಂಗೀತದಲ್ಲಿ ಉನ್ನತ ಸ್ಥಾನವನ್ನು ಸಾಧಿಸಿದ್ದಾರೆ. ಜನರು ಅವರನ್ನು ತಾಯಿ ಸರಸ್ವತಿಯ ಪ್ರತಿರೂಪವೆಂದು ಪರಿಗಣಿಸಿದರು. ಸುಮಾರು 80 ವರ್ಷಗಳ ಕಾಲ ಅವರ ಧ್ವನಿ ಸಂಗೀತ ಲೋಕದಲ್ಲಿ ತನ್ನ ಛಾಪು ಮೂಡಿಸಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಲತಾ ದೀದಿ ಭಾರತಕ್ಕೆ ಧ್ವನಿ ನೀಡಿದ್ದರು. ಈ 75 ವರ್ಷಗಳ ದೇಶದ ಪಯಣ ಅವರ ಸ್ವರಗಳೊಂದಿಗೆ ನಂಟು ಹೊಂದಿದೆ. ಲತಾ ದೀದಿ ಅವರ ತಂದೆ ದೀನಾನಾಥ್ ಮಂಗೇಶ್ಕರ್ ಅವರ ಹೆಸರೂ ಈ ಪ್ರಶಸ್ತಿಗೆ ಸಂಬಂಧಿಸಿದೆ. ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ನಾವೆಲ್ಲರೂ ದೇಶವಾಸಿಗಳಾದ ಮಂಗೇಶ್ಕರ್ ಕುಟುಂಬಕ್ಕೆ ಋಣಿಯಾಗಿದ್ದೇವೆ ಎಂದು ತಿಳಿಸಿದರು.

ದೀನಾನಾಥ್ ಮಂಗೇಶ್ಕರ್ ಅವರ ಪುಣ್ಯತಿಥಿಯಂದು ಪ್ರತಿ ವರ್ಷ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಆಯೋಜಿಸಲಾಗುವುದು. ರಾಷ್ಟ್ರ ನಿರ್ಮಾಣದಲ್ಲಿ ಅನುಕರಣೀಯ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಈ ಗೌರವವನ್ನು ನೀಡಲು ಉದ್ದೇಶಿಸಲಾಗಿದೆ. ಪ್ರಶಸ್ತಿಯನ್ನು ಪ್ರಕಟಿಸಿದ ಮಂಗೇಶ್ಕರ್ ಕುಟುಂಬ ಮತ್ತು ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್, ಲತಾ ಮಂಗೇಶ್ಕರ್ ಅವರ ಗೌರವ ಮತ್ತು ಸ್ಮರಣಾರ್ಥ ಈ ವರ್ಷದಿಂದ ಪ್ರಶಸ್ತಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ನಟಿ ಆಶಾ ಪರೇಖ್ ಮತ್ತು ನಟ ಜಾಕಿ ಶ್ರಾಫ್ ಅವರಿಗೆ ಮಾಸ್ಟರ್ ದೀನನಾಥ್ ವಿಶೇಷ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಭಾರತೀಯ ಸಂಗೀತಕ್ಕಾಗಿ ರಾಹುಲ್ ದೇಶಪಾಂಡೆ ಅವರಿಗೆ ಮಾಸ್ಟರ್ ದೀನನಾಥ್ ಪುರಸ್ಕಾರ, ಸಂಜಯ್ ಛಾಯಾ ಅವರಿಗೆ ನಾಟಕ ವಿಭಾಗದಲ್ಲಿ ಬೆಸ್ಟ್ ಡ್ರಾಮಾ ಅವಾರ್ಡ್ ಹಾಗೂ ಮುಂಬೈ ಡಬ್ಬಾವಾಲಾಕ್ಕೆ ಮಾಸ್ಟರ್ ದೀನನಾಥ್ ಆನಂದಮಯಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.