ಮನೆ ಸ್ಥಳೀಯ ನಂಜನಗೂಡು ತಾ.ಪಂ.ನಲ್ಲಿ ಸಿಇಓರಿಂದ ಪ್ರಗತಿ ಪರಿಶೀಲನಾ‌ ಸಭೆ

ನಂಜನಗೂಡು ತಾ.ಪಂ.ನಲ್ಲಿ ಸಿಇಓರಿಂದ ಪ್ರಗತಿ ಪರಿಶೀಲನಾ‌ ಸಭೆ

0

ನಂಜನಗೂಡು: ನೀರು ಎಲ್ಲಾ ಜೀವಿಗಳ ಮೂಲಭೂತ ಹಕ್ಕಾಗಿದ್ದು, ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೂರದಂತೆ ಶೀಘ್ರವೇ ಎಲ್ಲಾ ಗ್ರಾಮವನ್ನು ಹರ್ ಘರ್ ಜಲ್ ಎಂದು ಘೋಷಿಸಲು‌ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಂಜನಗೂಡು ತಾಲ್ಲೂಕು‌ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು, ನೀರಿ‌ನ ಪೈಪ್ ಅಳವಡಿಸುವ ವೇಳೆ ಗ್ರಾಮ ಪಂಚಾಯಿತಿಯ ಜಲ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಕಡ್ಡಾಯವಾಗಿ ಪರಿಶೀಲಸುವಂತೆ ತಿಳಿಸಿದರು.

ನರೇಗಾ ಯೊಜನೆ ಅಡಿ ವಿವಿಧ ಇಲಾಖೆಗಳಿಗೆ ನೀಡಿದ ಮಾನವದಿನಗಳ ಗುರಿಯನ್ನು ಶೀಘ್ರವೇ ಸಾಧಿಸಬೇಕು. ಯೋಜನೆ ಅಡಿ ಗ್ರಾಮ ಪಂಚಾಯಿತಿಗಳಲ್ಲಿ ಪೌಷ್ಟಿಕ ಕೈತೋಟ, ಸಮಗ್ರ ಶಾಲಾ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಅಂಗನವಾಡಿ ಕಟ್ಟಡಗಳಂತ ಜನಸ್ನೇಹಿ ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿ ಪಡಿಸುವಂತೆ ತಿಳಿಸಿದರು.

ಬೂದು ನೀರು ನಿರ್ವಹಣೆ, ಕುಡಿಯುವ ನೀರು, ಸ್ಯಾನಿಟೆಶನ್ ಹಾಗೂ ಜಲ ಜೀವನ್ ಮಿಷನ್ ಯೋಜನೆ ಅಡಿ ಶಾಲೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಬಗ್ಗೆ ಸಿಡಿಪಿಓ ಗಳು ಹಾಗೂ ಪಿ.ಡಿ.ಓ ಗಳು ಖಾತ್ರಿ ಪಡಿಸಿಕೊಳ್ಳುವಂತೆ ಸೂಚಿಸಿದರು.

ಗ್ರಂಥಾಲಯ ನಿರ್ವಹಣೆ ಕುರಿತು ಪ್ರಗತಿ ಪರಿಶೀಲಿಸಿದ ಅವರು, ಗ್ರಂಥ ಪಾಲಕರಿಗೆ ನಿರ್ವಹಣೆ ಹಾಗೂ ಇತರೆ ವಿಷಯಗಳ ಕುರಿತು‌ ಎಸ್.ಐ.ಆರ್.ಡಿ.ನಿಂದ ತರಬೇತಿ‌ ನೀಡಲಾಗಿದ್ದು, ತಾವುಗಳು ಕ್ರಿಯಾಶೀಲರಾಗಿ ಓದುಗರ ದಾಖಲಾತಿ ಹೆಚ್ಚಿಸಿ ಗ್ರಾಮ ಪಂಚಾಯಿತಿ ವತಿಯಿಂದ ಅವರಿಗೆ ಕಾರ್ಡ್ ಗಳನ್ನು ವಿತರಿಸುವಂತೆ ಸೂಚಿಸಿದರು.
ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ‌ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚುಸುವಲ್ಲಿ‌ ಲಕ್ಷ್ಯ ವಹಿಸಿ ಎಂದರು. ಅಲ್ಲದೆ ಶೈಕ್ಷಣಿಕ ಪುಸ್ತಕಗಳನ್ನು ತರಿಸಿಕೊಳ್ಳಬೇಕು. ಜೊತೆಗೆ ಕಡ್ಡಾಯವಾಗಿ ತಾಲ್ಲೂಕಿನಲ್ಲಿ ಶೇ. 100% ರಷ್ಟು ಡಿಜಿಟಲ್ ಗ್ರಂಥಾಲಯ‌ ಸ್ಥಾಪಿಸುವಂತೆ ಪಿಡಿಓಗಳಿಗೆ ಕಡಕ್ಕಾಗಿ ಸೂಚಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ನೀರು ಮತ್ತು ನೈರ್ಮಲ್ಯ ಸಮಿತಿ ಕಾರ್ಯಪಾಲಕ ಅಭಿಯಂತರರು, ನರೇಗಾ ಸಹಾಯಕ ನಿರ್ದೇಶಕಾದ ಶಿವಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಂಥ ಪಾಲಕರು ಸೇರಿದಂತೆ ಹಲವರು ಹಾಜರಿದ್ದರು.