ಬೆಂಗಳೂರು- ನಟಿ ಸಂಜನಾ ಗಲ್ರಾನಿ ತಾಯಿಯಾಗುತ್ತಿರುವ ಸಂತಸದಲ್ಲಿದ್ದು, ಸೀಮಂತ ಸಮಾರಂಭ ನೆರವೇರಿದೆ.
ಆಪ್ತ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ಸಂಜನಾ ಗಲ್ರಾನಿ ಅವರ ಸೀಮಂತ ಸರಳವಾಗಿ ಜರುಗಿದೆ. ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ನಟಿ ಸಂಜನಾ ಗಲ್ರಾನಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ನಟಿ ಸಂಜನಾ ಗಲ್ರಾನಿ ಇದೀಗ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂಜನಾ ಗಲ್ರಾನಿಗೆ ತಾರೆಯರು ಶುಭ ಹಾರೈಸಿದ್ದಾರೆ.
ದಕ್ಷಿಣ ಭಾರತದ ಸಂಪ್ರದಾಯದಂತೆ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನನ್ನ ಸೀಮಂತ ನಡೆಯಿತು. ಇನ್ನೊಂದು ತಿಂಗಳಿನಲ್ಲಿ ಮಗು ನನ್ನ ಮಡಿಲು ಸೇರಲಿದೆ. ಎಲ್ಲರ ಪ್ರೀತಿ ಹಾಗೂ ಆಶೀರ್ವಾದಕ್ಕೆ ನನ್ನ ಧನ್ಯವಾದಗಳು ಎಂದು ಇನ್ ಸ್ಟಾಗ್ರಾಮ್ ನಲ್ಲಿ ಸಂಜನಾ ಬರೆದುಕೊಂಡಿದ್ದಾರೆ.
ಸಂಜನಾ ಗಲ್ರಾನಿ ಅವರು ಡಾ.ಅಜೀಜ್ ಪಾಶಾ ಅವರನ್ನು ವಿವಾಹವಾಗಿದ್ದಾರೆ. ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಸಂಜನಾ ಹೆಸರು ಕೇಳಿ ಬಂದಿತ್ತು. ಕೆಲ ದಿನಗಳ ಕಾಲ ನ್ಯಾಯಾಂಗ ಬಂಧನ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಪ್ರಕರಣದಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ಸಂಜನಾ ಅವರು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಇದೀಗ ಸಂಜನಾ ಗಲ್ರಾನಿ, ಡಾ.ಅಜೀಜ್ ಪಾಶಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.