ಮನೆ ಕ್ರೀಡೆ ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟ

ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟ

0

ಬೆಂಗಳೂರು (Bengaluru)-ಭಾರತ (India) ಹಾಗೂ ದಕ್ಷಿಣ ಆಫ್ರಿಕಾ (South Africa) ವಿರುದ್ಧದ 5 ಪಂದ್ಯಗಳ ಟಿ20 (T20) ಸರಣಿಗೆ ವೇಳಾಪಟ್ಟಿ ಪ್ರಕಟಗೊಂಡಿದೆ. ಜೂನ್‌ 9 ರಿಂದ ಸರಣಿ ಆರಂಭವಾಗಲಿದೆ.

ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಸರಣಿಯ ಸಂಪೂರ್ಣ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಉದ್ಯಾನ ನಗರಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ಜೂನ್‌ 19ರಂದು ಜರುಗಲಿದ್ದು, ಉಳಿದ ಪಂದ್ಯಗಳಿಗೆ ಡೆಲ್ಲಿ, ಕಟಕ್‌, ವೈಝಾಗ್‌ ಮತ್ತು ರಾಜ್‌ಕೋಟ್‌ ನಗರಗಳು ಆತಿಥ್ಯ ವಹಿಸಿವೆ.

ಜೂನ್‌ 9 ರಂದು ಡೆಲ್ಲಿಯಲ್ಲಿ ಮೊದಲ ಟಿ 20 ಪಂದ್ಯ, ಜೂ.12 ರಂದು ಕಟಕ್‌ ನಲ್ಲಿ ಎರಡನೇ, ಜೂ.14 ರಂದು ವೈಝಾಗ್‌ ನಲ್ಲಿ ಮೂರನೇ, ಜೂ.17 ರಂದು ರಾಜ್‌ ಕೋಟ್‌ ನಲ್ಲಿ ನಾಲ್ಕನೇ, ಜೂ.19 ರಂದು ಬೆಂಗಳೂರಿನಲ್ಲಿ ಐದನೇ ಹಾಗೂ ಕೊನೆಯ ಪಂದ್ಯ ನಡೆಯಲಿದೆ.

ಈ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ನಡೆಯಲಿದ್ದು, ಇದಕ್ಕೆ ಪೂರ್ವ ಸಿದ್ಧತೆ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಸರಣಿ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

ಈ ವರ್ಷ ಭಾರತದಲ್ಲಿ ಆಯೋಜನೆ ಆಗುತ್ತಿರುವ ಮೂರನೇ ದ್ವಿಪಕ್ಷೀಯ ಟಿ20 ಕ್ರಿಕೆಟ್‌ ಸರಣಿ ಇದಾಗಿದೆ. ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ಮತ್ತು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಗಳಲ್ಲಿ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ಕ್ಲೀನ್‌ ಸ್ವೀಪ್‌ ಸಾಧನೆ ಮೆರೆದಿತ್ತು.

ಐಪಿಎಲ್‌ ಟೂರ್ನಿ ಬಳಿಕ ಬಿಸಿಸಿಐ ಆಯ್ಕೆ ಸಮಿತಿ ಸಭೆ ಸೇರಲಿದ್ದು, ಮುಂಬರುವ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗೆ ಭಾರತ ತಂಡವನ್ನು ಕಟ್ಟಲಿದೆ. ಐಪಿಎಲ್‌ 2022 ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಕೆಲ ಸ್ಟಾರ್‌ ಆಟಗಾರರು ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, ಕೆಲ ಯುವ ಪ್ರತಿಭೆಗಳು ಟೀಮ್ ಇಂಡಿಯಾಗೆ ಕಾಲಿಡುವ ಸಾಧ್ಯತೆ ದಟ್ಟವಾಗಿದೆ.