ಧಾರವಾಡ (Dharwad)-ಹಿಂದಿ ರಾಷ್ಟ್ರದ ಒಂದು ಭಾಷೆಯೇ ಹೊರತು, ರಾಷ್ಟ್ರಭಾಷೆ ಅಲ್ಲ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ (Dr.Baragur Ramachandrappa) ಹೇಳಿದ್ದಾರೆ.
ʻಹಿಂದಿ ರಾಷ್ಟ್ರ ಭಾಷೆ ಅಲ್ಲʼ ಎಂದು ನಟ ಕಿಚ್ಚ ಸುದೀಪ್ (Sudeep) ಹೇಳಿದ್ದರು. ಇದಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ (Ajay Devagan) ಅವರು ʻಹಿಂದಿ ರಾಷ್ಟ್ರ ಭಾಷೆʼ ಎಂದಿದ್ದರು. ಈ ವಿಚಾರದ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ರಾಜಕೀಯ ನಾಯಕರು, ಸಿನಿಮಾ ತಾರೆಯರು, ಕನ್ನಡಪರ ಹೋರಾಟಗಾರರು ಕನ್ನಡಿಗರು ಸುದೀಪ್ ಬೆಂಬಲಕ್ಕೆ ನಿಂತಿದ್ದರು.
ಇದೀಗ ಈ ವಿಚಾರದ ಬಗ್ಗೆ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರು ಪ್ರತಿಕ್ರಿಯಿಸಿದ್ದು, ಭಾರತದ ಇತರ ಭಾಷೆಗಳಂತೆಯೇ ಹಿಂದಿಯೂ ರಾಷ್ಟ್ರದ ಒಂದು ಭಾಷೆಯೇ ಹೊರತು, ರಾಷ್ಟ್ರಭಾಷೆ ಅಲ್ಲ ಎಂದು ಒತ್ತಿ ಹೇಳಿದ್ದಾರೆ.
ಹಿಂದಿ ಅನುಷ್ಠಾನಕ್ಕೆ ಇರುವ ಆಯೋಗದಂತೆಯೇ ಒಕ್ಕೂಟ ರಾಷ್ಟ್ರದಲ್ಲಿ ಆಯಾ ಪ್ರದೇಶದ ರಾಜ್ಯ ಭಾಷೆ ಹಾಗೂ ಮಾತೃಭಾಷೆಗಳಿಗೆ ಮಹತ್ವ ಸಿಗಬೇಕು. ಸರ್ವಭಾಷಾ ಸಮಾನತೆಯೇ ಒಕ್ಕೂಟ ಸರ್ಕಾರದ ನೀತಿಯಾಗಬೇಕು. ಯಾವುದೇ ಭಾಷೆ ಅವರ ಇಚ್ಛೆಯಂತೆ ಕಲಿಸಲು ಪ್ರೋತ್ಸಾಹಿಸಲಿ. ಆದರೆ ಅದನ್ನೇ ರಾಷ್ಟ್ರಭಾಷೆ ಎಂದು ಕಲಿಸುವುದು ಖಂಡಿತಾ ತಪ್ಪು. ಅದಕ್ಕೆ ನಮ್ಮ ವಿರೋಧವಿದೆ ಎಂದರು.
ರಾಜ್ಯದ ಮುಖ್ಯಮಂತ್ರಿಗಳು ಒಂದು ಸಭೆ ನಡೆಸಿ ರಾಷ್ಟ್ರೀಯ ಭಾಷಾ ನೀತಿ ರಚಿಸಲು ಒಕ್ಕೂಟ ಸರ್ಕಾರದ ಮೇಲೆ ಒತ್ತಡ ಹೇರಲು ಇದು ಸಕಾಲ ಎಂದು ಹೇಳಿದ್ದಾರೆ.