ಕಳೆದ ಶತಮಾನದಲ್ಲಿ ಆದಂತಹ ಅನೇಕ ವೈಜ್ಞಾನಿಕ ಸಂಶೋಧನೆಗಳು – ಆವಿಷ್ಕಾರಗಳಿಂದ ನಮ್ಮ ದೇಹಕ್ಕೆ ಸುಖ ನೆಮ್ಮದಿ ಕೊಡುವ ವಿವಿಧ ಬಗೆಯ ವಸ್ತು ವಿಶೇಷಗಳು ನಮಗೆ ಲಭ್ಯವಾಗಿದೆ. ಈ ವಸ್ತುಗಳು ಸಂಪಾದನೆಗಾಗಿ ನಮ್ಮ ಮನಸ್ಸನ್ನು ಒತ್ತಡ ಬೆಂಕಿಯೊಳಕ್ಕೆ ನೂಕಿದ್ದೇವೆ. ರುಚಿರುಚಿಯಾದ ಆಹಾರ ಪದಾರ್ಥಗಳು, ವಿವಿಧ ಬಗೆಯ ಒಡವೆ ವಸ್ತುಗಳು, ಸೋಫಾ, ಫ್ರಿಡ್ಜ್, ಏರ್ ಕಂಡೀಷನಿಂಗ್, ಓಡಾಡಲು ಕಾರು, ಸ್ಕೂಟರ್, ಮನರಂಜನೆಗೆ ಟಿವಿ, ಸಿನಿಮಾ, ವಿಡಿಯೋ, ಅಂತರ್ಜಾಲ, ಇವೆಲ್ಲ ನೀಡುವ ಸಂತೋಷ ಅಲ್ಪಕಾಲವಿರುತ್ತದೆ. ಮುಗಿದ ತಕ್ಷಣ ಮತ್ತಷ್ಟು ಬೇಕು ಎನಿಸುತ್ತದೆ.
ನಮಗಿಲ್ಲದನ್ನು, ಇನ್ನೊಬ್ಬರಿಗೆ ಸಿಕ್ಕಿದೆ ಎಂದಾಗ ಮನಸ್ಸಿನಲ್ಲಿ ಮತ್ಸರ ಮೂಡುತ್ತದೆ. ಹೀಗೆ ನಾವು ಅನಗತ್ಯಗಳನ್ನು ಹೆಚ್ಚು ಮಾಡಿಕೊಂಡು ಅಂತ್ಯವಿಲ್ಲದ ಸ್ಪರ್ಧೆಯಲ್ಲಿ ಭಾಗವಹಿಸಿ ಹೆಚ್ಚಿನ ಸಾಲ-ಸೋಲ ಮಾಡುತ್ತಾ, ದುಃಖ, ಕೋಪ, ಬಯಗಳ ನಕಾರಾತ್ಮಕ ಭಾವನೆಗಳ ಹೊಗೆಯಲ್ಲಿ ಉಸಿರಾಡಲು ಆಗದಂತಹ ಸ್ಥಿತಿಯನ್ನು ಮುಟ್ಟಿದ್ದೇವೆ…. ಈ ಭಾವನೆಗಳ ಹೊಯ್ದಾಟ ಒತ್ತಡದ ಬೆಂಕಿಯ ಬೇಗೆಯಲ್ಲಿ ದೇಹ ಮತ್ತು ಮನಸ್ಸು ಎರಡು ಘಾಸಿಗೊಳಗಾಗುತ್ತಿವೆ. ಮನಸ್ಸಿನ ಏಕಾಗ್ರತೆ, ಕಲಿಯುವ ಮತ್ತು ಕಲಿತಿದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿ, ಸಮಸ್ಯೆ ಎದುರಾದಾಗ ಅದನ್ನು ವಿಶ್ಲೇಷಿಸಿ ಪರಿಹಾರವನ್ನು ಆಲೋಚಿಸುವ ಸಾಮರ್ಥ್ಯ, ದ್ವಂದಗಳು ಕಾಣಿಸಿಕೊಂಡಾಗ, ನಿರ್ಧಾರಗಳನ್ನು ಕೈಗೊಳ್ಳಬೇಕಾದ ಅಗತ್ಯವಾದ ವಿವೇಚನ ಶಕ್ತಿ ಇದರಿಂದಾಗಿ ಕಡಿಮೆಯಾಗುತ್ತಿದೆ.
ದೇಹ ಸದಾ ತುರ್ತುಪರಿಸ್ಥಿತಿಯನ್ನು ಎದುರಿಸುವ ಸಿದ್ಧತೆಯನ್ನು ಮಾಡುತ್ತಿರುತ್ತದೆ. ತತ್ವ ಪರಿಣಾಮವಾಗಿ ಹಸಿವು, ಆಹಾರ, ಜೀರ್ಣವಾಗುವ ಪ್ರಕ್ರಿಯೆ, ಮಲಮುತ್ರ ವಿಸರ್ಜನೆ, ನಿದ್ರೆ, ಲೈಂಗಿಕ ಸಾಮರ್ಥ್ಯ ಏರುಪೇರಾಗುತ್ತದೆ. ಅನೇಕ ಅಂಗಾಂಗಗಳು ಅವಧಿಗೆ ಮುಂಚೆಯೇ ಸವೆದು ರೋಗ ಗ್ರಸ್ತವಾಗುತ್ತಿವೆ. ಇದು ಎಲ್ಲೆಡೆ ಹೆಚ್ಚಾಗಿ ಹಲವು ಜನರಲ್ಲಿ ಕಂಡುಬರುತ್ತಿರುವ ಸಿಹಿ ಮೂತ್ರ ರೋಗ, ರಕ್ತದ ಏರೊತ್ತಡ, ಅಸ್ತಮಾ, ಕೀಲು ನೋವು, ಮೈಗ್ರೇನ್ ಅಥವಾ ಟೆನ್ಶನ್ ತಲೆನೋವು, ಹೃದಯಘಾತ, ಬೊಜ್ಜು, ಕ್ಯಾನ್ಸರ್ ಗಳು ಮಾನಸಿಕ ಒತ್ತಡ, ಜನ್ಯ ಕಾಯಿಲೆಗಳಿಂದಲೇ ಗುರುತಿಸಲ್ಪಟ್ಟಿದೆ. ಇವುಗಳ ಚಿಕಿತ್ಸೆಗೆ ಔಷಧಿಗಳು ಎಷ್ಟು ಮುಖ್ಯವೋ, ಮಾನಸಿಕ ಒತ್ತಡದ ನಿವಾರಣೆಯು ಅಷ್ಟೇ ಮುಖ್ಯವಾಗುತ್ತದೆ.
ಈಗಿನ ಪ್ರಸ್ತಕ ಜೀವನ ಶೈಲಿಯಲ್ಲಿ, ಅವ್ಯವಸ್ಥೆ, ಶೋಷಣೆ, ಪಕ್ಷಪಾತಗಳಿಂದ ತುಂಬಿದ ನಮ್ಮ ಸಮಾಜದಲ್ಲಿ ಮಾನಸಿಕ ನೆಮ್ಮದಿಯನ್ನು ಪಡೆಯುವುದು ಹೇಗೆ….?
ಮೊದಲನೆಯದಾಗಿ ನಾವು ನಮ್ಮ ಅಗತ್ಯಗಳನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಿಕೊಳ್ಳಬೇಕು. ಅದು ಹಣವಾಗಲೀ, ಪ್ರಶಸ್ತಿ ಪುರಸ್ಕಾರ ಸ್ಥಾನಮಾನವಾಗಲಿ, ಪ್ರೀತಿಯಾಗಲಿ, ಭೋಗ ವಸ್ತುಗಳಾಗಲಿ, ಎಷ್ಟು ಸಿಗುತ್ತದೆಯೋ ಅಷ್ಟರಲ್ಲಿ ತೃಪ್ತಿ ಕೊಡುವ ಅಭ್ಯಾಸ ಮಾಡಬೇಕು.
ನಾವು ಮಾಡುವ ಉದ್ಯೋಗ, ಯಾವುದೇ ಕೆಲಸ ಚಟುವಟಿಕೆಯನ್ನು, ಮನಸ್ಸಿಟ್ಟು ಮಾಡಿ, ಸಂತೋಷಪಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ನಮ್ಮ ಮನೆಯವರ, ಸಹೋದ್ಯೋಗಿಗಳ ಬಂದುಮಿತ್ರರ ವ್ಯಕ್ತಿತ್ವ ಸ್ವಭಾವಗಳನ್ನ ಅರ್ಥಮಾಡಿಕೊಳ್ಳಬೇಕು. ಅವರಲ್ಲಿ ಕೊರತೆ- ನ್ಯೂನತೆಗಳನ್ನು ದೊಡ್ಡದು ಮಾಡದೆ, ಅವರ ಒಳ್ಳೆಯ ಗುಣ ವರ್ತನೆಗಳನ್ನು ಗುರುತಿಸಿ ಶ್ಲಾಘಿಸಬೇಕು. ನಾವು ಅವರೊಂದಿಗೆ ಹೊಂದಿಕೊಳ್ಳಲು ಅವರು ನಮ್ಮೊಂದಿಗೆ ಹೊಂದಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಸಂದರ್ಭಗಳಲ್ಲಿ ತೆಗೆದುಕೊಳ್ಳುವುದಕ್ಕಿಂತ ಕೊಡುವುದಕ್ಕೆ ಆದ್ಯತೆ ನೀಡಬೇಕು. ಕೊಟ್ಟು ಸಂತೋಷ ಪಡಬೇಕು.
ಪ್ರತಿನಿತ್ಯ, ಸ್ವಲ್ಪ ಹೊತ್ತಾದರೂ, ಮನಸ್ಸಿನ ಗಮನವನ್ನು ತಮ್ಮೆಡೆಗೆ ಸೆಳೆದು ಉಲ್ಲಾಸ ವಿರಾಮವನ್ನು ಕೊಡುವ ಚಟುವಟಿಕೆ ಹವ್ಯಾಸಗಳನ್ನು ಹಮ್ಮಿಕೊಳ್ಳಬೇಕು. ಉದಾಹರಣೆ ಸಂಗೀತ, ಓದು, ಭಜನೆ, ದೇವರನಾಮ, ಪ್ರಾರ್ಥನಾ ಸ್ಥಳಗಳಿಗೆ ಹೋಗುವುದು, ಆತ್ಮೀಯರೊಡನೆ ಸರಸ, ಸಂಭಾಷಣೆ, ಮಕ್ಕಳು, ಮುದ್ದು ಪ್ರಾಣಿಗಳೊಂದಿಗೆ ಆಡುವುದು, ಒಳಾಂಗಣ ಅಥವಾ ಹೊರಾಂಗಣ ಕ್ರೀಡೆಗಳು, ಯೋಗ, ಪ್ರಾಣಾಯಾಮ, ಧ್ಯಾನ, ಪ್ರೇಕ್ಷಣೀಯ ಅಥವಾ ಪ್ರಕೃತಿ ಸುಂದರ ಸ್ಥಳಗಳಿಗೆ ಭೇಟಿ ಇತ್ಯಾದಿ.
ಬಿಡುವಿನ ವೇಳೆಯಲ್ಲಿ ಇತರೆರಿಗೆ ನೆರವಾಗುವುದು ಸೇವಾ ಚಟುವಟಿಕೆಗಳು ದಾನ ಧರ್ಮ ಪರೋಪಕಾರಗಳು ಮನಸ್ಸಿನ ನೆಮ್ಮದಿಯನ್ನು ಹೆಚ್ಚಿಸುತ್ತದೆ.
ನಿನ್ನೆ ನಾಳೆಗಳ ಬಗ್ಗೆ ಅನಗತ್ಯವಾಗಿ ಚಿಂತೆ ಮಾಡದೆ, ಆ ದಿನವನ್ನು ಉಪಯುಕ್ತವಾದ ರೀತಿಯಲ್ಲಿ ನಿರ್ವಹಿಸಬೇಕು. ಎಲ್ಲರಲ್ಲಿ ಎಲ್ಲಾದರಲ್ಲಿ ಒಳ್ಳೆಯದನ್ನ ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಿರಾಶ್ರಾವಾದವನ್ನು ಬದಿಗಿಟ್ಟು ಆಶಾವಾದಿಯಾಗಿರಬೇಕು.
ದೀನದುರ್ಬಲರ ಸೇವೆ, ಜ್ಞಾನಾರ್ಜನೆ, ಸಮಾಜದ ಒಳತಿಗೆ ಕೆಲಸ ಮಾಡುವುದರಿಂದ ದಿವ್ಯ ಆನಂದ ಉಂಟಾಗುವುದು.