ಮನೆ ಅಪರಾಧ ಫೋಟೋಗಾಗಿ ಯುವಕನ ಹತ್ಯೆ: ನಾಲ್ವರು ಆರೋಪಿಗಳ ಬಂಧನ

ಫೋಟೋಗಾಗಿ ಯುವಕನ ಹತ್ಯೆ: ನಾಲ್ವರು ಆರೋಪಿಗಳ ಬಂಧನ

0

ಬೆಂಗಳೂರು ಗ್ರಾಮಾಂತರ: ಪೋಟೋಗಾಗಿ ಯುವಕನೋರ್ವನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.

ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿ ಮತ್ತು ಕೊಡಿಗೇಹಳ್ಳಿಯವರಾದ ದಿಲೀಪ್, ಅವಿನಾಶ್, ಕಿರಣ್ ಮತ್ತು ಜಗದೀಶ್ ಎಂಬುವವರು ನವಂಬರ್ 12 ರಂದು ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಬಳಿಯಿರುವ ಡಾಬಾ ಬಳಿ ಬಂದು ಪಾರ್ಟಿ ಮಾಡುತ್ತಿದ್ದರು.

ಈ ವೇಳೆ ಅಲ್ಲಿ ಒಳ್ಳೆ ಫೋಟೋ ಬರುತ್ತೆ ಎಂದು ದೊಡ್ಡಬಳ್ಳಾಪುರ ನಗರದ ಕಛೇರಿ ಪಾಳ್ಯ ನಿವಾಸಿ ಸೂರ್ಯ ಎಂಬಾತ ತನ್ನ ಸ್ನೇಹಿತರ ಜೊತೆ ಬಾಡಿಗೆ ಕ್ಯಾಮೆರಾ ತಂದು ಫೋಟೋಶೂಟ್ ಮಾಡುತ್ತಿದ್ದ. ಈ ವೇಳೆ ತನ್ನದು ಎರಡು ಫೋಟೋ ತೆಗಿ ಎಂದು ಆರೋಪಿ ದಿಲೀಪ್  ಕಿರಿಕ್ ಮಾಡಿದ್ದು, ಪೊಟೋ ತೆಗೆಸಿಕೊಂಡು ಫೋನ್ ​ಗೆ ಕಳಿಸುವಂತೆ ಹೇಳಿದ್ದಾನೆ. ಆದ್ರೆ, ಈ ವೇಳೆ ಪೋನ್​ ನಿಂದ ನೇರವಾಗಿ ಕಳಿಸುವುದಕ್ಕೆ ಆಗಲ್ಲವೆಂದು ಸೂರ್ಯ ಹೇಳಿದ್ದ. ಅಷ್ಟೇ ಕೋಪಗೊಂಡ ದಿಲೀಪ್​ ಕ್ಯಾಮರಾ ಕಿತ್ತುಕೊಂಡು ಗಲಾಟೆ ಮಾಡಿದ್ದಾನೆ. ಬಳಿಕ ಕ್ಯಾಮರಾ ಕಿತ್ತುಕೊಳ್ಳಲು ಮುಂದಾದ ಸೂರ್ಯನನ್ನು ಕೀ ಚೈನ್ ಚಾಕುವಿನಿಂದ ಇರಿದು ಕೊಲೆ ಮಾಡಿ ನಾಲ್ವರು ಆರೋಪಿಗಳು ಎಸ್ಕೇಪ್ ಆಗಿದ್ದರು.

ಇನ್ನು ಸೂರ್ಯನ ಎದೆ ಭಾಗಕ್ಕೆ ಚುಚ್ಚಿದ್ದ ಪರಿಣಾಮ ಸೂರ್ಯ ಕೆಳಗೆ ಬಿದ್ದು ಸಾವನ್ನಪಿದ್ದ. ಈ ಕುರಿತು ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ದಿಲೀಪ್, ಅವಿನಾಶ್, ಕಿರಣ್ ಮತ್ತು ಜಗದೀಶ್ ಎಂಬ ನಾಲ್ವರನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿಯ ಬಂಧನಕ್ಕೂ ಬಲೆ ಬೀಸಿದ್ದಾರೆ. ಜೊತೆಗೆ ಕುಡಿದ ನಶೆಯಲ್ಲಿ ಕಿರಿಕ್ ಮಾಡಿ ಸೂರ್ಯನನ್ನು ಕೊಲೆ ಮಾಡಿದ್ದಾಗಿಯೂ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಇನ್ನು ಬಂಧಿತರಿಂದ ಕೃತ್ಯಕ್ಕೆ ಬಳಸಿದ ಚಾಕು ಮತ್ತು ಒಂದು ಬೈಕ್​ನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.