ಮನೆ ರಾಜ್ಯ ತೊಂದರೆ ನಿವಾರಿಸಿ, ಸೌಲಭ್ಯ ಕಲ್ಪಿಸಿ: ಅಲ್ಪಸಂಖ್ಯಾತರ ಆಗ್ರಹ

ತೊಂದರೆ ನಿವಾರಿಸಿ, ಸೌಲಭ್ಯ ಕಲ್ಪಿಸಿ: ಅಲ್ಪಸಂಖ್ಯಾತರ ಆಗ್ರಹ

0

ಮೈಸೂರು(Mysuru): ಜಾತಿ–ಆದಾಯ ಪ್ರಮಾಣಪತ್ರ, ವಿದ್ಯಾರ್ಥಿವೇತನ ಪಡೆಯುವಲ್ಲಿ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು. ಪ್ರತ್ಯೇಕ ಸ್ಮಶಾನ ಭೂಮಿ ಒದಗಿಸಬೇಕು. ಸೌಲಭ್ಯಕ್ಕಾಗಿ ಅಲೆದಾಡಿಸಬಾರದು ಎಂಬಿತ್ಯಾದಿ ಬೇಡಿಕೆಗಳನ್ನು ಅಲ್ಪಸಂಖ್ಯಾತರು ಅಧಿಕಾರಿಗಳ ಮುಂದಿಟ್ಟರು.

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ನಗರದ ಜಿ.ಪಂ ಸಭಾಂಗಣದಲ್ಲಿ ಬುಧವಾರ ನಡೆಸಿದ ‘ಅಲ್ಪಸಂಖ್ಯಾತ ಸಮುದಾಯದ ಮುಖಂಡರೊಂದಿಗೆ ಕೋಮು ಸೌಹಾರ್ದ ಸಭೆ’ಯಲ್ಲಿ ಹಲವು ಕುಂದುಕೊರತೆಗಳನ್ನು ಮಂಡಿಸಿದ ಅಲ್ಪಸಂಖ್ಯಾತರು ಅವುಗಳನ್ನು ಪರಿಹರಿಸುವಂತೆ ಆಗ್ರಹಿಸಿದರು.

ಜೈನ ಸಮುದಾಯದ ಮುಖಂಡ ಸುರೇಶ್‌ಕುಮಾರ್‌ ಜೈನ್ ಮಾತನಾಡಿ, ಜೈನರಲ್ಲಿ ದಿಗಂಬರ ಹಾಗೂ ಶ್ವೇತಾಂಬರರಲ್ಲಿ ಉಪಜಾತಿಗಳಿವೆ. ಆದರೆ, ಅದು ನಮೂದಾಗುತ್ತಿಲ್ಲ. ಆದ್ದರಿಂದ, ಜನಗಣತಿ ನಮೂನೆಯಲ್ಲೇ ಉಪ ಜಾತಿಗಳನ್ನು ನಮೂದಿಸಬೇಕು. ದಿಗಂಬರ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೈಸೂರಿನಲ್ಲಿ ಜೈನರಿಗೆ ಪ್ರತ್ಯೇಕ ಸ್ಮಶಾನ ಭೂಮಿ ಇಲ್ಲ. ಸರ್ಕಾರದಿಂದ ಜಾಗ ಒದಗಿಸಿದರೆ, ಸಮಾಜದಿಂದಲೇ ನಿರ್ವಹಣೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಜೈನರ ಬಸದಿ, ದೇವಸ್ಥಾನ ಮೊದಲಾದ ಆಸ್ತಿಗಳ ಗಡಿ ಸಮೀಕ್ಷೆ ನಡೆಸಬೇಕು. ಎಷ್ಟೋ ಜಾಗಗಳು ನಮಗೇ ಸೇರಿದ್ದರೂ ಬಹುಸಂಖ್ಯಾತರ ಮುಂದೆ ನಾವು ಮಾತನಾಡಲಾಗದ ಸ್ಥಿತಿ ಇದೆ. ಚಾಮುಂಡಿಬೆಟ್ಟದ ದೇವಸ್ಥಾನ ಜೈನರಿಗೆ ಸೇರಿದ್ದು. ಹೀಗೆ ಅನೇಕ ನಿದರ್ಶನಗಳಿವೆ ಎಂದರು.

ಪ್ರತಿಕ್ರಿಯಿಸಿದ ಅಧ್ಯಕ್ಷ ಅಜೀಂ, ಜನಗಣತಿ ನಮೂನೆಯಲ್ಲಿ ಉಪ ಜಾತಿ ನಮೂದಿಸುವಂತೆ ಸೂಚಿಸಲಾಗುವುದು. ಸ್ಮಶಾನಗಳಿಗೆ ಜಾಗ ಕೊಡಬೇಕು. ಇಲ್ಲದಿದ್ದರೆ ಖರೀದಿಸಿಕೊಡಬೇಕು ಎಂದು ತಹಶೀಲ್ದಾರ್‌ಗಳಿಗೆ ಸರ್ಕಾರ ಆದೇಶಿಸಿದೆ. ಬಸದಿಗಳ ಗಡಿ ಸಮೀಕ್ಷೆಗೂ ಸೂಚಿಸಲಾಗಿದೆ ಎಂದು ತಿಳಿಸಿದರು.

ಮೈಸೂರಿನ ಗುರುದ್ವಾರದಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು ಎಂದು ಸಿಖ್‌ ಮುಖಂಡರು ಕೋರಿದರು.

ಹಿಂದಿನ ಲೇಖನಶೇ. 40 ರಷ್ಟು  ಕಮಿಷನ್ ಕೇಳಿರುವ ಬಗ್ಗೆ ದಾಖಲೆ ಕೊಡದಿದ್ದರೇ ಮಾನನಷ್ಟ ಮೊಕದ್ಧಮೆ ಹಾಕುವೆ: ಸಚಿವ ಮುನಿರತ್ನ
ಮುಂದಿನ ಲೇಖನಮನೆಗಳ್ಳತನಕ್ಕೆ ಯತ್ನ: ನಾಲ್ವರ ಬಂಧನ, ಇಬ್ಬರಿಗೆ ಗುಂಡೇಟು