ಮನೆ ಸ್ಥಳೀಯ ಜ.22 ರಂದು ಮಂಡ್ಯದಲ್ಲೂ ರಾಮಮಂದಿರ ಲೋಕಾರ್ಪಣೆ

ಜ.22 ರಂದು ಮಂಡ್ಯದಲ್ಲೂ ರಾಮಮಂದಿರ ಲೋಕಾರ್ಪಣೆ

0

ಮಂಡ್ಯ:ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಗೆ ಕೇವಲ 4 ದಿನಗಳು ಬಾಕಿ ಉಳಿವೆ.ಈ ಐತಿಹಾಸಿಕ ದಿನಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ವಿಶೇಷವೆಂದರೆ ಬಾಲರಾಮನ ಪ್ರಾಣಪ್ರತಿಷ್ಠೆ ದಿನವೇ ಮಂಡ್ಯದಲ್ಲೂ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ.


ಜನವರಿ 22ರಂದು ರಾಮಮಂದಿರದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಅದೇ ದಿನ ಮಂಡ್ಯದಲ್ಲೂ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ವಿಶೇಷವೆಂದರೆ ಈ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಮೂರ್ತಿಯನ್ನು ಕೂಡಾ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಕೆತ್ತನೆ ಮಾಡಿದ್ದಾರೆ.
ಮಂಡ್ಯದ ಲೇಬರ್ ಕಾಲೋನಿಯಲ್ಲಿ ನೂತನವಾಗಿ ರಾಮಮಂದಿರ ನಿರ್ಮಾಣಗೊಂಡಿದೆ. ರಾಮನ ವಿಗ್ರಹ ಸುಮಾರು 3-4 ಅಡಿ ಎತ್ತರವಿದೆ. ರಾಮನ ಮೂರ್ತಿ ಜೊತೆ ಶಿಲ್ಪಿ ಅರುಣ್ ಯೋಗಿರಾಜ್ ಸೀತೆ, ಲಕ್ಷ್ಮಣ ಹಾಗೂ ಹನುಮಂತನ ವಿಗ್ರಹವನ್ನೂ ಕೆತ್ತನೆ ಮಾಡಿಕೊಟ್ಟಿದ್ದಾರೆ. ಈ ಮೂರ್ತಿಗಳನ್ನು 1 ವರ್ಷದ ಹಿಂದೆಯೇ ಕೆತ್ತನೆ ಮಾಡಿಕೊಟ್ಟಿದ್ದರು.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಂದೇ ಮಂಡ್ಯದಲ್ಲಿಯೂ ರಾಮನ ಪ್ರತಿಷ್ಠಾಪನೆ ಮಾಡಬೇಕೆಂದು ದೇವಾಲಯದ ಟ್ರಸ್ಟ್ ತೀರ್ಮಾನಿಸಿತ್ತು. ಲೇಬರ್ ಕಾಲೋನಿ ನಿವಾಸಿಗಳೇ ಟ್ರಸ್ಟ್ ರಚಿಸಿಕೊಂಡು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯ ಲೋಕಾರ್ಪಣೆ ದಿನ ಹತ್ತಿರವಾಗುತ್ತಿದ್ದಂತೆ ಕಾಲೋನಿ ನಿವಾಸಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯ ಪೂಜಾ ಕೈಂಕರ್ಯದಂತೆ ಇಲ್ಲಿಯೂ ದೇಗುಲ ಲೋಕಾರ್ಪಣೆ ನಡೆಯಲಿದೆ ಎಂದು ಟ್ರಸ್ಟಿಗಳು ತಿಳಿಸಿದ್ದಾರೆ.