ಮನೆ ರಾಜ್ಯ ದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ: ರಾಜ್ಯದ ಎಲ್ಲ ಸಂಸದರಿಗೆ, ಕೇಂದ್ರ ಸಚಿವರಿಗೆ ಖುದ್ದು ಪತ್ರ ಬರೆದ...

ದೆಹಲಿಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ: ರಾಜ್ಯದ ಎಲ್ಲ ಸಂಸದರಿಗೆ, ಕೇಂದ್ರ ಸಚಿವರಿಗೆ ಖುದ್ದು ಪತ್ರ ಬರೆದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ರಾಜ್ಯಕ್ಕೆ ಕೇಂದ್ರದ ಅನುದಾನ ತಾರತಮ್ಯ ಆರೋಪಿಸಿ ನಾಳೆ ದೆಹಲಿಯಲ್ಲಿ ನಡೆಸಲಿರುವ ರಾಜ್ಯ ಕಾಂಗ್ರೆಸ್​ ನಾಯಕರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರಿ ಸಿಎಂ ಸಿದ್ದರಾಮಯ್ಯ ರಾಜ್ಯದ ಎಲ್ಲ ಸಂಸದರಿಗೆ ಮತ್ತು ರಾಜ್ಯದ ಕೇಂದ್ರ ಸಚಿವರಿಗೆ ಖುದ್ದು ಪತ್ರ ಬರೆದು ಮನವಿ ಮಾಡಿದ್ದಾರೆ.

ಕನ್ನಡಿಗರ ಹಕ್ಕು ಮತ್ತು ಸ್ವಾಭಿಮಾನಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯ ಮತ್ತು ಕನ್ನಡಿಗರ ತೆರಿಗೆ ಹಣಕ್ಕೆ ಆಗುತ್ತಿರುವ ವಂಚನೆ ವಿರೋಧಿಸಿ ನಾಳೆ ದೆಹಲಿಯ ಜಂತರ್​ ಮಂತರ್​ನಲ್ಲಿ ಕನ್ನಡಿಗರ ಸ್ವಾಭಿಮಾನಿ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ಸಂಸದರಿಗೆ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಿಗೆ ಖುದ್ದಾಗಿ ಪತ್ರ ಬರೆದಿದ್ದಾರೆ.

ತಮ್ಮ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ, ಒಂದು ವಿಶೇಷ ಸಂದರ್ಭದಲ್ಲಿ ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ. ಕೇಂದ್ರ ಸರ್ಕಾರದಿಂದ ಆಗುತ್ತಿರುವ ನಿರಂತರ ಅನ್ಯಾಯ ಮತ್ತು ಕರ್ನಾಟಕದ ವಿಚಾರವಾಗಿ ಕೇಂದ್ರ ಸರ್ಕಾರವು ತೋರುತ್ತಿರುವ ಮಲತಾಯಿ ಧೋರಣೆಯು ತಮಗೆ ಈಗಾಗಲೇ ತಿಳಿದ ವಿಷಯವಾಗಿರುತ್ತದೆ. ಇದರ ವಿರುದ್ಧ ಪತಿಭಟಿಸಲು ಮತ್ತು ದೇಶದ ಗಮನ ಸೆಳೆಯಲು ತೀರ್ಮಾನಿಸಲಾಗಿದೆ. ರಾಜ್ಯದ ಉಪ ಮುಖ್ಯಮಂತ್ರಿಗಳು, ಎಲ್ಲ ಸಚಿವರು, ಶಾಸಕರು ಮತ್ತು ಸಂಸದರು ಸೇರಿ ದೆಹಲಿಯ ಜಂತರ್​ ಮಂತರ್‌ನಲ್ಲಿ ಫೆಬ್ರವರಿ, 07 ರಂದು ಒಂದು ದಿನದ ಧರಣಿ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.

ಕರ್ನಾಟಕಕ್ಕೆ ತೆರಿಗೆ ಪಾಲಿನ ಹಂಚಿಕೆಯಲ್ಲಿ ಆಗುತ್ತಿರುವ ಭಾರೀ ಅನ್ಯಾಯ, ಬರಪರಿಹಾರ ನೀಡದಿರುವುದು, ವಿವಿಧ ಯೋಜನೆಗಳಿಗೆ ಅನುಮತಿ ಮತ್ತು ನೆರವು ನೀಡುವಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಮತ್ತು ವಿಳಂಬ ಇತ್ಯಾದಿಗಳು ರಾಜ್ಯದಲ್ಲಿ ಜನಜೀವನವನ್ನು ವಿಪರೀತವಾಗಿ ಬಾಧಿಸುತ್ತಿವೆ. ಈ ವಿಚಾರವನ್ನು ಜವಾಬ್ದಾರಿಯುತ ಚುನಾಯಿತ ಪ್ರತಿನಿಧಿಗಳಾದ ತಾವು ಅರಿತೇ ಇರುತ್ತೀರಿ, ಆದುದರಿಂದ, ಈ ಧರಣಿ ಸತ್ಯಾಗ್ರಹದಲ್ಲಿ ತಾವು ಕೂಡಾ ಪಾಲ್ಗೊಂಡು ಅದರ ಯಶಸ್ಸಿಗೆ ನೆರವಾಗಬೇಕು ಎಂದು ತಮ್ಮಲ್ಲಿ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ವಿನಂತಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.

ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್​ನ ಶಾಸಕರು ಮಂತ್ರಿಗಳು ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಲಿದೆ. ಇತ್ತ ಸಿಎಂ ಸಿದ್ದರಾಮಯ್ಯ ನಿನ್ನೆ ಸುದ್ದಿಗೋಷ್ಠಿಯಲ್ಲಿ ಇದು ಬಿಜೆಪಿ ವಿರುದ್ಧದ ಪ್ರತಿಭಟನೆ ಅಲ್ಲ.‌ ಇದು ರಾಜಕೀಯ ಪ್ರತಿಭಟನೆ ಅಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್​ ಸಂಸದರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದರು. ಇದೀಗ ಎಲ್ಲ ಸಂಸದರಿಗೆ ಹಾಗೂ ರಾಜ್ಯ ಪ್ರತಿನಿಧಿಸುವ ಎಲ್ಲಾ ಸಚಿವರುಗಳಿಗೆ ಖುದ್ದು ಪತ್ರ ಬರೆದು ಮನವಿ ಮಾಡಿದ್ದಾರೆ.