ಮಂಡ್ಯ:ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಹೊಸದಾಗಿ ನಿರ್ಮಾಣ ಮಾಡುವ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಮಂಡ್ಯ ಸಂಸದೆ ಸುಮಲತಾ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಜೊತೆಯಾಗಿ ವೇದಿಕೆಯಲ್ಲಿ ಕಾಣಿಸಿಕೊಂಡರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಕಳೆದ ಕೆಲವು ದಿನಗಳಿಂದ ಸುಮಲತಾ ಮತ್ತು ಚಲುವರಾಯಸ್ವಾಮಿ ಪರಸ್ಪರ ಟೀಕಾ ಪ್ರಹಾರದಲ್ಲಿ ನಿರತರಾಗಿದ್ದಾರೆ.ಹೀಗಿರುವಾಗ, ವೇದಿಕೆ ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.ಶಾಸಕ ರವಿಕುಮಾರ್ ಗಣಿಗ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿ ಮಂಡ್ಯ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
ಮೋದಿ ಘೋಷಣೆ ಕೂಗಿದ ಕಾರ್ಯಕರ್ತರು
ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿಗಾಗಿ ಜೈಶ್ರೀರಾಂ ಎಂದು ಘೋಷಣೆ ಕೂಗಿದರು.ಇದೆ ವೇಳೆ ಸಚಿವರ ಬೆಂಬಲಿಗರು, ‘ಚಲುವರಾಯಸ್ವಾಮಿಗೆ ಜೈ’ ಎಂಬ ಘೋಷಣೆಗಳನ್ನು ಕೂಗಿದರು. ಕಾರ್ಯಕರ್ತರು ಪರಸ್ಪರ ಘೋಷಣೆಗಳನ್ನು ಕೂಗಿದ್ದು ಚಲುವರಾಯಸ್ವಾಮಿಯವರ ಸಿಟ್ಟಿಗೆ ಕಾರಣವಾಯಿತು.ಇದು ಸರ್ಕಾರಿ ಕಾರ್ಯಕ್ರಮ.ಯಾವುದೆ ರಾಜಕೀಯ ಪಕ್ಷದ ಕಾರ್ಯಕ್ರಮವೂ ಅಲ್ಲ.ಹೀಗಾಗಿ ನೀವು ಎಷ್ಟೇ ಘೋಷಣೆ ಕೂಗಿದರೂ ಪ್ರಯೋಜನವಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಂಡ್ಯ ಕ್ಷೇತ್ರದ ಕುತೂಹಲ ಹೆಚ್ಚಾಗಿದೆ. ಬಿಜೆಪಿ ಜೆಡಿಎಸ್ ಮೈತ್ರಿಕೂಟವು ಸೀಟು ಹಂಚಿಕೆಯನ್ನು ಇನ್ನೂ ಅಂತಿಮ ಗೊಳಿಸಿಲ್ಲ. ಆದಾಗ್ಯೂ ಮಂಡ್ಯ ಕ್ಷೇತ್ರದ ಟಿಕೆಟ್ ಜೆಡಿಎಸ್ ಗೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.ಹೀಗಾಗಿ ಅಸಮಾಧಾನಗೊಂಡಿರುವ ಸುಮಲತಾ ಹಲವು ಸಭೆಗಳನ್ನು ನಡೆಸಿದ್ದಾರೆ.ಒಂದು ವೇಳೆ ಬಿಜೆಪಿ ಬೆಂಬಲ ಸಿಗದಿದ್ದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ಸಮಾಲೋಚನೆಗಳನ್ನು ನಡೆಸುತ್ತಿದ್ದಾರೆ.ಇದೇ ಸಂದರ್ಭದಲ್ಲಿ ಸರ್ಕಾರಿ ಕಾರ್ಯಕ್ರಮವಾದರೂ, ಚಲುವರಾಯಸ್ವಾಮಿ ಜೊತೆ ವೇದಿಕೆ ಹಂಚಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.