ಮನೆ ಸುದ್ದಿ ಜಾಲ ಕಾರ್ಮಿಕ ದಿನಾಚರಣೆ: 35 ಸಿಬ್ಬಂದಿಗಳಿಗೆ ಸನ್ಮಾನ

ಕಾರ್ಮಿಕ ದಿನಾಚರಣೆ: 35 ಸಿಬ್ಬಂದಿಗಳಿಗೆ ಸನ್ಮಾನ

0

ಮೈಸೂರು (Mysuru)- ನೈಋತ್ಯ ರೈಲ್ವೆ ಮೈಸೂರು ವಿಭಾಗದ ಮಹಿಳಾ ಕಲ್ಯಾಣ ಸಂಸ್ಥೆಯು ಮೈಸೂರಿನ ವಿಭಾಗೀಯ ವ್ಯವಸ್ಥಾಪಕರ ಕಚೇರಿಯ ಸಭಾಗೃಹದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪೂಜಾ ಅಗರ್ವಾಲ್ ರವರು, 25 ವರ್ಷಗಳಿಗಿಂತ ಹೆಚ್ಚು ಸೇವೆಯನ್ನು ಪೂರ್ಣಗೊಳಿಸಿದ ಮತ್ತು ತಮ್ಮ ಕರ್ತವ್ಯದ ಅವಧಿಯಲ್ಲಿ ಆದರ್ಶಪ್ರಾಯ ಕೆಲಸ ಮಾಡಿದ ಮೈಸೂರು ವಿಭಾಗದ ವಿವಿಧ ಇಲಾಖೆಗಳ 35 ಪ್ರತಿಭಾನ್ವಿತ ಸಿಬ್ಬಂದಿಗಳನ್ನು ಸನ್ಮಾನಿಸಿದರು.

ನಂತರ ಮಾತನಾಡಿದ ಅವರು, ಸಂಸ್ಥೆಗೆ ಸಿಬ್ಬಂದಿಗಳು ಅತ್ಯಂತ ದೊಡ್ಡ ಆಸ್ತಿ.‌ಭಾರತೀಯ ರೈಲ್ವೆಯ ಅಭಿವೃದ್ಧಿಗೆ ಅವರು ಸಲ್ಲಿಸಿರುವ ಗಮನಾರ್ಹ ಸೇವೆಗಾಗಿ ಧನ್ಯವಾದ ಅರ್ಪಿಸಿದರು. ಅವರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಅವರ ಶ್ರಮವನ್ನು ಶ್ಲಾಘಿಸಿದರು. ಪ್ರಶಸ್ತಿ ಪುರಸ್ಕೃತರು ತಮ್ಮ ಉತ್ತಮ ಕೆಲಸವನ್ನು ಮುಂದುವರೆಸುವಂತೆ ಪ್ರೋತ್ಸಾಹಿಸಿದರು.

ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್, ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕರುಗಳಾದ ಎ.ದೇವಸಹಾಯಂ, ಬುಡತಿ ಶ್ರೀನಿವಾಸುಲು, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿಗಳಾದ ಪ್ರಶಾಂತ್ ಮಾಸ್ತಿಹೊಳಿ, ಮಹಿಳಾ ಕಲ್ಯಾಣ ಸಂಸ್ಥೆಯ ಸದಸ್ಯರು ಹಾಗೂ ಮೈಸೂರು ವಿಭಾಗದ ಇತರೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.