ಮನೆ ಕ್ರೀಡೆ ಐಪಿಎಲ್- 2024: ಆರ್​ ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್ ಇಲೆವೆನ್

ಐಪಿಎಲ್- 2024: ಆರ್​ ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್ ಇಲೆವೆನ್

0

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-17 ಗಾಗಿ ಆರ್​ ಸಿಬಿ ಬಲಿಷ್ಠ ಪಡೆಯನ್ನು ರೂಪಿಸಿದೆ. ಹರಾಜಿಗೂ ಮುನ್ನ 19 ಆಟಗಾರರನ್ನು ಉಳಿಸಿಕೊಂಡಿದ್ದ ಆರ್ ​ಸಿಬಿ, ದುಬೈನಲ್ಲಿ ನಡೆದ ಆಕ್ಷನ್ ಮೂಲಕ 6 ಆಟಗಾರರನ್ನು ಖರೀದಿಸಿದೆ. ಈ ಮೂಲಕ 25 ಆಟಗಾರರ ಬಲಿಷ್ಠ ಬಳಗವನ್ನು ರೂಪಿಸಿಕೊಂಡಿದೆ.

ಈ ಬಳಗದಿಂದ ಆರ್ ​ಸಿಬಿ ಪರ ಕಣಕ್ಕಿಳಿಯುವ ಆಟಗಾರರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಂಪಲ್. ಕಳೆದ ಸೀಸನ್​ನಲ್ಲಿ ಆಡಿದ್ದ ಆಟಗಾರರೇ ಈ ಬಾರಿ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಟಾಪ್-4 ನಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ ಎಂದೇ ಹೇಳಬಹುದು. ಅದರಂತೆ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ…

1- ಫಾಫ್ ಡುಪ್ಲೆಸಿಸ್: ಆರ್ ​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಈ ಬಾರಿ ಕೂಡ ಆರಂಭಿಕನಾಗಿ ಕಣಕ್ಕಿಳಿಯುವುದು ಖಚಿತ. ಏಕೆಂದರೆ ಡುಪ್ಲೆಸಿಸ್ ಕಳೆದ ಸೀಸನ್​ನಲ್ಲಿ 14 ಪಂದ್ಯಗಳಿಂದ ಒಟ್ಟು 730 ರನ್ ಪೇರಿಸಿದ್ದರು. ಹೀಗಾಗಿ ಈ ಬಾರಿ ಕೂಡ ಡುಪ್ಲೆಸಿಸ್ ಇನಿಂಗ್ಸ್ ಆರಂಭಿಸಲಿದ್ದಾರೆ.

2- ವಿರಾಟ್ ಕೊಹ್ಲಿ: ಕಳೆದ ಸೀಸನ್ ​ನಲ್ಲಿ ಫಾಫ್ ಡುಪ್ಲೆಸಿಸ್​ಗೆ ಜೋಡಿಯಾಗಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದ್ದರು. ಅಲ್ಲದೆ 14 ಪಂದ್ಯಗಳಿಂದ ಒಟ್ಟು 639 ರನ್ ಕಲೆಹಾಕಿದ್ದಾರೆ. ಹೀಗಾಗಿ ಡುಪ್ಲೆಸಿಸ್ ಜೊತೆ ಕಿಂಗ್ ಕೊಹ್ಲಿಯೇ ಇನಿಂಗ್ಸ್ ಆರಂಭಿಸುವುದು ಖಚಿತ ಎನ್ನಬಹುದು.

3- ರಜತ್ ಪಾಟಿದಾರ್: ಆರ್ ​ಸಿಬಿ ಪರ ಮೂರನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಕಣಕ್ಕಿಳಿಯಲಿದ್ದಾರೆ. 2022 ರಲ್ಲಿ ಆರ್​ಸಿಬಿ ಪರ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಪಾಟಿದಾರ್ 8 ಪಂದ್ಯಗಳಿಂದ 333 ರನ್​ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ರಜತ್ ಆಡುವ ಸಾಧ್ಯತೆ ಹೆಚ್ಚಿದೆ.

4- ಗ್ಲೆನ್ ಮ್ಯಾಕ್ಸ್​ವೆಲ್: ಆರ್​ಸಿಬಿ ತಂಡದ ನಾಲ್ಕನೇ ಕ್ರಮಾಂಕ ಗ್ಲೆನ್ ಮ್ಯಾಕ್ಸ್​ವೆಲ್​​ಗೆ ಸೀಮಿತ. ಕಳೆದ ಸೀಸನ್​ನಲ್ಲಿ ಇದೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಮ್ಯಾಕ್ಸಿ ಒಟ್ಟು 400 ರನ್​ ಕಲೆಹಾಕಿದ್ದರು. ಹೀಗಾಗಿ ಈ ಬಾರಿ ಕೂಡ ಅವರು 4ನೇ ಕ್ರಮಾಂಕದಲ್ಲೇ ಆಡಲಿದ್ದಾರೆ.

5- ಕ್ಯಾಮರೋನ್ ಗ್ರೀನ್: 5ನೇ ಕ್ರಮಾಂಕದಲ್ಲಿ ಆರ್​ಸಿಬಿ ತಂಡಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಆಸ್ಟ್ರೇಲಿಯಾ ಆಲ್​ರೌಂಡರ್ ಕ್ಯಾಮರೋನ್ ಗ್ರೀನ್ ಕಣಕ್ಕಿಳಿಯಲಿದ್ದಾರೆ. ಮುಂಬೈ ಇಂಡಿಯನ್ಸ್ ಪರ 16 ಪಂದ್ಯಗಳಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿರುವ ಗ್ರೀನ್ ಒಟ್ಟು 452 ರನ್ ಕಲೆಹಾಕಿದ್ದಾರೆ. ಹೀಗಾಗಿ ಅವರನ್ನು 5ನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆ ಹೆಚ್ಚಿದೆ.

6- ಮಹಿಪಾಲ್ ಲೋಮ್ರರ್: 6ನೇ ಕ್ರಮಾಂಕದಲ್ಲಿ ಎಡಗೈ ಸ್ಪಿನ್ ಆಲ್​ರೌಂಡರ್ ಮಹಿಪಾಲ್ ಲೋಮ್ರರ್​ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಏಕೆಂದರೆ ಮಹಿಪಾಲ್ ಕಳೆದ ಸೀಸನ್ ​ನಲ್ಲಿ ಆರ್ ​ಸಿಬಿ ಪರ 12 ಪಂದ್ಯಗಳನ್ನಾಡಿದ್ದರು. ಹೀಗಾಗಿ ಈ ಬಾರಿ ಕೂಡ ಅವರನ್ನೇ ಆಡುವ ಬಳಗದಲ್ಲಿ ಬಳಸಿಕೊಳ್ಳಬಹುದು.

7- ದಿನೇಶ್ ಕಾರ್ತಿಕ್: ಆರ್​ಸಿಬಿ ಪರ ಈ ಬಾರಿ ಕೂಡ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ 7ನೇ ಕ್ರಮಾಂಕದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

8- ಮೊಹಮ್ಮದ್ ಸಿರಾಜ್: ಆರ್​ಸಿಬಿ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವುದು ಖಚಿತ. ಏಕೆಂದರೆ ಕಳೆದ ಸೀಸನ್​ನಲ್ಲಿ ಸಿರಾಜ್ 14 ಪಂದ್ಯಗಳಿಂದ 19 ವಿಕೆಟ್ ಕಬಳಿಸಿ ಮಿಂಚಿದ್ದರು.

9- ವಿಜಯ್ ಕುಮಾರ್ ವೈಶಾಕ್: ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ 7 ಪಂದ್ಯಗಳನ್ನಾಡಿದ್ದ ವಿಜಯ್ ಕುಮಾರ್ ವೈಶಾಕ್ 9 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಮೊದಲಾರ್ಧದ ಪಂದ್ಯಗಳಲ್ಲಿ ಕರ್ನಾಟಕದ ವೇಗಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

10- ರೀಸ್ ಟೋಪ್ಲಿ: ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ರೀಸ್ ಟೋಪ್ಲಿ ಕೂಡ ಈ ಬಾರಿ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನ ಭಾಗವಾಗಲಿದ್ದಾರೆ. ಏಕೆಂದರೆ ಟೋಪ್ಲಿ ಅವರನ್ನು ಆರ್​ಸಿಬಿ ಕಳೆದ ಸೀಸನ್​ನಲ್ಲೇ ಆರಂಭಿಕ ಪಂದ್ಯಗಳಲ್ಲಿ ಕಣಕ್ಕಿಸಿತ್ತು. ಆದರೆ ಗಾಯದ ಕಾರಣ ಅವರು ಅರ್ಧದಲ್ಲೇ ಟೂರ್ನಿಯಿಂದ ಹೊರ ನಡೆದಿದ್ದರು. ಹೀಗಾಗಿ ಈ ಬಾರಿ ಟೋಪ್ಲಿ ಆಡುವ ಬಳಗದ ಭಾಗವಾಗುವುದರಲ್ಲಿ ಡೌಟೇ ಇಲ್ಲ ಎನ್ನಬಹುದು.

11- ಕರ್ಣ್​ ಶರ್ಮಾ: ಐಪಿಎಲ್ 2023 ರಲ್ಲಿ ಆರ್​ಸಿಬಿ ಪರ 7 ಪಂದ್ಯಗಳನ್ನಾಡಿದ್ದ ಸ್ಪಿನ್ನರ್ ಕರ್ಣ್ ಶರ್ಮಾ ಒಟ್ಟು 10 ವಿಕೆಟ್ ಕಬಳಿಸಿದ್ದರು. ಹೀಗಾಗಿ ಈ ಬಾರಿ ಕೂಡ ಆರ್​ಸಿಬಿ ತಂಡದ ಸ್ಪಿನ್ನರ್ ಆಯ್ಕೆಯಲ್ಲಿ ಕರ್ಣ್ ಹೆಸರು ಮುಂಚೂಣಿಯಲ್ಲಿರಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.