ಮನೆ ರಾಜ್ಯ ಆನೆಗೊಂದಿ ಉತ್ಸವ: ಹಳಸಿದ ಅನ್ನ, ಇತರ ಪದಾರ್ಥ ಸೇವಿಸಿ 30 ಕುರಿ-ಮೇಕೆ ಸಾವು

ಆನೆಗೊಂದಿ ಉತ್ಸವ: ಹಳಸಿದ ಅನ್ನ, ಇತರ ಪದಾರ್ಥ ಸೇವಿಸಿ 30 ಕುರಿ-ಮೇಕೆ ಸಾವು

0

ಗಂಗಾವತಿ: ತಾಲೂಕಿನ ಆನೆಗೊಂದಿಯ ಕಡೆಬಾಗಿಲು ಗ್ರಾಮದ ಬಳಿ ಹಳಸಿದ ಅನ್ನ- ಇತರೆ ಪದಾರ್ಥಗಳನ್ನು ತಿಂದು 30 ಕುರಿ-ಮೇಕೆಗಳು ಸಾವನ್ನಪ್ಪಿ, 180ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡ ಘಟನೆ ಮಾ.15ರ  ಬೆಳಗ್ಗೆ ನಡೆದಿದೆ.

ಮಾ.11,12 ರಂದು ಜರುಗಿದ ಆನೆಗೊಂದಿ ಉತ್ಸವದ ಸಂದರ್ಭ ಉತ್ಸವಕ್ಕೆ ಆಗಮಿಸಿದವರಿಗೆ ಸಿದ್ದಪಡಿದ್ದ ಅನ್ನ ಹಾಗೂ ಇತರೆ ಆಹಾರ ಪದಾರ್ಥಗಳು ಉಳಿದಿದ್ದು, ಉತ್ಸವದ ನಂತರ ಅಧಿಕಾರಿಗಳು ಸರಿಯಾಗಿ ಅವುಗಳನ್ನು ನಾಶಪಡಿಸದೇ ಉತ್ಸವದ ಮೈದಾನ ಹಾಗೂ ಊಟದ ವ್ಯವಸ್ಥೆ ಮಾಡಿದ್ದ ಜಾಗದಲ್ಲಿ ಚೆಲ್ಲಿದ್ದರಿಂದ ಅವುಗಳನ್ನು ಸಂಚಾರಿ ಕುರಿಗಾರರ ಕುರಿಗಳು, ‌ಮೇಕೆಗಳು ತಿಂದ ಪರಿಣಾಮ 30 ಕುರಿಗಳು, ಮೇಕೆಗಳು ಸಾವನ್ನಪ್ಪಿದ್ದು 180ಕ್ಕೂ ಹೆಚ್ಚು ಕುರಿ-ಮೇಕೆಗಳು ಅಸ್ವಸ್ಥಗೊಂಡಿವೆ.

ಸುದ್ದಿ ತಿಳಿದು ಪಶುವೈದ್ಯಕೀಯ ಇಲಾಖೆಯ ವೈದ್ಯರು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಸ್ವಸ್ಥ ಕುರಿ-ಮೇಕೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪಶು ವೈದ್ಯಕೀಯ ಇಲಾಖೆಯ ಡಾ. ಜಾಕೀರ ಹುಸೇನ್, ಡಾ.ಸೋಮಪ್ಪ ಹಾಗೂ ಸಿಬ್ಬಂದಿ ವರ್ಗದವರು ಚಿಕಿತ್ಸೆ ನೀಡುತ್ತಿದ್ದಾರೆ.

ಪರಿಹಾರಕ್ಕೆ ಆಗ್ರಹ: ಆನೆಗೊಂದಿ ಉತ್ಸವದಲ್ಲಿ ಉಳಿದ ಅನ್ನ ಇತರ ಪದಾರ್ಥಗಳು ಹಳಸಿದ್ದನ್ನು ವಿಲೇವಾರಿ ಮಾಡದೇ ಅಲ್ಲೇ ಬಿಸಾಕಿದ್ದನ್ನು ತಿಂದು 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಕುರಿಗಳು ಆಸ್ವಸ್ಥಗೊಂಡಿವೆ.

ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಇಂಥ ಅವಘಡ ಸಂಭವಿಸಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಸತ್ತ ಕುರಿ ಮತ್ತು ಮೇಕೆಗಳಿಗೆ ರಾಜ್ಯ ಸರ್ಕಾರ ವೈಜ್ಞಾನಿಕ ಪರಿಹಾರ ನೀಡುವಂತೆ ತಾಲೂಕು ಯಾದವ ಸಂಘದ ಅಧ್ಯಕ್ಷ ನ್ಯಾಯವಾದಿ, ಯಾದವ್ ಮಲ್ಲಾಪುರ್ ಒತ್ತಾಯಿಸಿದ್ದಾರೆ.