ಮನೆ ರಾಜ್ಯ ಟ್ರ್ಯಾಕ್ ರೆಕಾರ್ಡ್ ಇಟ್ಟುಕೊಂಡೇ ಚುನಾವಣೆಗೆ ಬಂದಿದ್ದೇವೆ, ಜನರ ಆಶೀರ್ವಾದ ಬೇಡುತ್ತಿದ್ದೇವೆ:  ಸಚಿವ ಪ್ರಿಯಾಂಕ್ ಖರ್ಗೆ

ಟ್ರ್ಯಾಕ್ ರೆಕಾರ್ಡ್ ಇಟ್ಟುಕೊಂಡೇ ಚುನಾವಣೆಗೆ ಬಂದಿದ್ದೇವೆ, ಜನರ ಆಶೀರ್ವಾದ ಬೇಡುತ್ತಿದ್ದೇವೆ:  ಸಚಿವ ಪ್ರಿಯಾಂಕ್ ಖರ್ಗೆ

0

ಕಲಬುರಗಿ: ಈ ಹಿಂದಿನ ನಮ್ಮ ಸರ್ಕಾರದ ಅಭಿವೃದ್ದಿಯ ಟ್ರ್ಯಾಕ್ ರಿಕಾರ್ಡ್ ಹಾಗೂ ಮುಂದಿನ ಭವಿಷ್ಯದ ನೀಲಿ ನಕ್ಷೆಯೊಂದಿಗೆ ನಾವು ಈಗ ಮತ ಕೇಳುತ್ತಿದ್ದೇವೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

Join Our Whatsapp Group

ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಏರ್ಪಡಿಸಿದ್ದ ಕಲಬುರಗಿ ದಕ್ಷಿಣ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಮತಯಾಚಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದ ಜನರ ಅರ್ಥಿಕ ಹಾಗೂ ಸಾಮಾಜಿಕ ಸ್ಥಿರತೆ ಹಾಗೂ ಸ್ವಾಭಿಮಾನದ ಜೀವನ ನಡೆಸಲು ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲಾಗಿದೆ.ಚುನಾವಣೆ ಮುನ್ನ ನೀಡಿದ ಭರವಸೆಯಂತೆ ನಡೆದುಕೊಂಡಿದ್ದೇವೆ.ಈ ಹಿಂದಿನ ನಲವತ್ತು ಪರ್ಸೆಂಟ್ ಬಿಜೆಪಿ ಸರಕಾರ ಇಂತಹ ಯಾವುದಾದರೂ ಒಂದು ಯೋಜನೆ ಜಾರಿಗೆ ತಂದಿದ್ದರೆ ತಿಳಿಸಲಿ ಎಂದು ಸವಾಲು ಹಾಕಿದರು.

ಕಳೆದ‌ ಲೋಕಸಭೆ ಚುನಾವಣೆಯಲ್ಲಿ ಜನರು ಕಲಬುರಗಿಗೆ ಒಬ್ಬ ಸಂಸದ ಬೇಕು ಎಂದು ಓಟು ಹಾಕಿದ್ದರು. ಆದರೆ ಅವರಿಗೆ ಸಿಕ್ಕಿದ್ದು ಚಿಂಚೋಳಿ ಸಂಸದರು ಎಂದು ಕುಟುಕಿದ ಸಚಿವರು, ಕಾಂಗ್ರೆಸ್ ದು ರೀಲ್ ಬಿಜೆಪಿದು ರಿಯಲ್ ಎಂದು ಜಾಧವ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರಿಗೆ ತಲುಪುತ್ತಿವೆ ಅದು ರಿಯಲ್ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಪೆಟ್ರೋಲ್ ಬೆಲೆ ರೂ 70 ಇದ್ದುದ್ದು ಈಗ 100 ಆಗಿದೆ, ಡಿಸೇಲ್ ಬೆಲೆ ರೂ 55 ಇದ್ದಿದ್ದು ಈಗ 90 ಆಗಿದೆ. ಸಿಲೆಂಡರ್ ಬೆಲೆ ರೂ 400 ಇದ್ದಿದ್ದು ಈಗ 1000 ಆಗಿದೆ. ಬೆಲೆ ಏರಿದ್ದು ರಿಯಲ್ ಅಲ್ಲವೇ ? ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಆರ್ಟಿಕಲ್ 371 J ತಿರಸ್ಕಾರ ಆಗಿದ್ದು ನಿಜ. ಅವರ ಸರ್ಕಾರದಲ್ಲಿ ಹಾಲು ಮೊಸರು ಸೇರಿದಂತೆ ಬಹುತೇಕ ವಸ್ತುಗಳ ಬೆಲೆ ಏರಿದೆ ಅದು ರಿಯಲ್ ಅಲ್ಲವೇ?  “ಜಾಧವ್ ಅವರೇ ರೀಲ್ ಹಾಗೂ ರಿಯಲ್ ಬಗ್ಗೆ ಚರ್ಚೆಗೆ ನಾವು ರೆಡಿ ಇದ್ದೇವೆ‌ ನೀವು ಚರ್ಚೆಗೆ ಬರ್ತೀರಾ. ನನ್ನ ಬದಲು ನಮ್ಮ ಕಾರ್ಯಕರ್ತರೇ ಬರುತ್ತಾರೆ, ನೀವು ಚರ್ಚೆಗೆ ಬನ್ನಿ ” ಎಂದು ಆವ್ಹಾನ ನೀಡಿದರು.

ಕೋಲಿ ಹಾಗೂ ಕಬ್ಬಲಿಗ ಸಮೂದಾಯಕ್ಕೆ ಎಸ್ ಟಿಗೆ ಸೇರಿಸುವ ಭರವಸೆ ನೀಡಿದ್ದ ಬಿಜೆಪಿ  ಈಗ ಮೋಸ ಮಾಡಿದೆ. ತೆರಿಗೆ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಜಾಧವ ಸೇರಿದಂತೆ ರಾಜ್ಯದ ಇತರೆ ಎಂಪಿ ಗಳು ಮಾತನಾಡುವುದಿಲ್ಲ ಎಂದು ಅವರು ಟೀಕಿಸಿದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಗೆ ಎನ್ನುವ ಬಿಜೆಪಿ ನಾಯಕರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಪಕ್ಷದ ದೋ ನಂಬರ್ ದಂಧೆ ನಡೆಸುವವರಿಗೆ ಒಳಗೆ ಹಾಕಿದ್ದೇವಲ್ಲ ಹಾಗಾಗಿ ಕಾನೂನು ಸುವ್ಯವಸ್ಥೆ ಹಾಳಾಗಿದೆ  ಎಂದು ಬಿಜೆಪಿಗರು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾನೂನು ಸುವ್ಯವಸ್ಥೆ ಹಾಳಾಗಿರುವುದು ಗುಜರಾತ್ ನಲ್ಲಿ. ಅಲ್ಲಿ ನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇತ್ತೀಚಿಗೆ ಬೆಂಗಳೂರಿನ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ನಡೆದಿರುವ ಪ್ರಕರಣದ ಪ್ರಮುಖ ಆರೋಪಿ ತರಬೇತಿ ಪಡೆದಿರುವುದು ಅರಗ ಜ್ಞಾನೇಂದ್ರ ಅವರ ಸ್ವಂತ ಕ್ಷೇತ್ರದಲ್ಲಿ. ಇದನ್ನು ಕಾನೂನು ಸುವ್ಯವಸ್ಥೆ ಕುಸಿತ ಎನ್ನಬಹುದು ಎಂದು ತಿರುಗೇಟು ನೀಡಿದರು.

ಅಫಜಲ್ ಪುರ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರ ‘ ಹುಲಿಯನ್ನೇ ಹೊಡೆದಿದ್ದೇವೆ ಇಲಿ ಯಾವ ಲೆಕ್ಕ’  ಎನ್ನುವ ಹೇಳಿಕೆಗೆ ತೀವ್ರ ತಿರುಗೇಟು ನೀಡಿದ ಖರ್ಗೆ, ಈ ಮಾತು ಹೇಳಿರುವುದು ಎರಡು ಸಲ ಸೋತವರು. ಮೋದಿ ಅವರ ಹೆಸರಲ್ಲಿ ಟಿಕೇಟು ಪಡೆದು ಚುನಾವಣೆಗೆ ನಿಂತು  ಕಳೆದ ವಿಧಾನಸಭೆಯಲ್ಲಿ ಸೋಲುವುದಿರಲಿ, ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಗುತ್ತೇದಾರ ಹೇಳುತ್ತಾರೆ ಎಂದರೆ ಅವರಿಗೆ ಇಲಿ ಎನ್ನಬೇಕಾ ಅಥವಾ ಏನನ್ನಬೇಕು ? ಎಂದು ಕುಟುಕಿದರು.

ಬಿಜೆಪಿಯ ದುರಾಡಳಿತದಿಂದಾಗಿ ರಾಜ್ಯ ಅಭಿವೃದ್ದಿ ವಿಚಾರದಲ್ಲಿ ಹಿಂದೆ ಹೋಗಿದೆ. ಕಲಬುರಗಿಯಲ್ಲಿ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕಾರ್ಯಕರ್ತರು 30 ದಿನ ಕಷ್ಟಪಟ್ಟರೇ, ಮುಂದಿನ ಐದು ವರ್ಷಗಳ ನೆಮ್ಮದಿಯ ಜೀವನದ ಗ್ಯಾರಂಟಿ ನಾನು ಕೊಡುತ್ತೇನೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಮಾತನಾಡಿ, ರಾಜ್ಯ ಸರ್ಕಾರದ ಯೋಜನೆಗಳನ್ನು ಜನರ ಮನೆಗೆ ತಲುಪಿಸಬೇಕು. ಆ ಮೂಲಕ ಜನರ ಬಳಿ ಮತ ಯಾಚಿಸಬೇಕು ಎಂದರು.

ಕೆಕೆಅರ್ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನದಲ್ಲಿ ತಾರತಮ್ಯ ಮಾಡುತ್ತಿದೆ. ಕರ್ನಾಟಕ ರಾಜ್ಯ ವಾರ್ಷಿಕ, 4.75 ಲಕ್ಷ ಕೋಟಿ ತೆರಿಗೆ ಕಟ್ಟಿದ್ದರೆ ಪರಿಹಾರ ರೂಪದಲ್ಲಿ ರಾಜ್ಯಕ್ಕೆ ಕೇವಲ ರೂ 52,000 ಕೋಟಿ ಮಾತ್ರ ನೀಡುತ್ತಿದೆ. ಬರಪರಿಹಾರಕ್ಕಾಗಿ ಕೇಂದ್ರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಆದರೂ ಅನುದಾನ ಬಿಡುಗಡೆ ಮಾಡಿಲ್ಲ ದೂರಿದರು.

ಮಾಜಿ ಸಚಿವ ಬಾಬುರಾವ ಚಿಂಚನಸೂರು ಮಾತನಾಡಿ, ಕೋಲಿ ಸಮಾಜವನ್ನು ಎಸ್ ಟಿ‌ಗೆ ಸೇರಿಸುವುದಾಗಿ ನಂಬಿಸಿ ಉಮೇಶ ಜಾಧವ ಬಿಜೆಪಿಗೆ ಕರೆದುಕೊಂಡು ಹೋದ, ಆದರೆ ಮೋಸ ಮಾಡಿದ. ದೇಶದಲ್ಲಿಯೇ ಅತಿ ಹೆಚ್ಚು ಸುಳ್ಳು ಹೇಳುವ ಎಂಪಿ ಇದ್ದರೆ ಅದು ಜಾಧವ್. ಅವನನ್ನು ಸುಳ್ಳಿನ ಯೂನಿವರ್ಸಿಟಿಯ ಉಪಕುಲಪತಿಯನ್ನಾಗಿ ಮಾಡಬೇಕು ಎಂದು ವ್ಯಂಗ್ಯವಾಡಿದರು.

ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಮಾಜಿ ಸಚಿವರಾದ ಬಾಬುರಾವ ಚಿಂಚನಸೂರು, ರೇವು ನಾಯಕ ಬೆಳಮಗಿ, ಡೇವಿಡ್ ಸಿಮೆಯೋನ್, ಮಾಜಿ ಶಾಸಕ ಶರಣಪ್ಪ ಮಟ್ಟೂರು,ಚಂದ್ರಿಕಾ ಪರಮೇಶ್ವರಿ, ಶರಣು ಮೋದಿ, ನೀಲಕಂಠ ಮೂಲಗೆ, ಮಜರ್ ಖಾನ್,  ಡಾ ಕಿರಣ್ ದೇಶಮುಖ, ಪ್ರವೀಣದ ಹರವಾಳ, ಫಾರೂಖ್ ಸೇರಿದಂತೆ ಹಲವರಿದ್ದರು.