ಬೆಂಗಳೂರು/ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಫೋಟೋ ಬಳಕೆಗೆ ಪೈಪೋಟಿ ಶುರುವಾಗಿದೆ.
ಬಿಜೆಪಿ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ. ಆದರೆ ಅವರ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಬಳಕೆ ಮಾಡುತ್ತಿದ್ದಾರೆ. ಇದು ರಾಜ್ಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು,ಇದೀಗ ಈಶ್ವರಪ್ಪ ಅವರು ಚುನಾವಣಾ ನರೇಂದ್ರ ಮೋದಿ ಫೋಟೋ ಮತ್ತು ಹೆಸರು ಬಳಕೆ ಮಾಡದಂತೆ ಬಿಜೆಪಿ, ದೂರು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮತ್ತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ದೂರು ಸಲ್ಲಿಕೆ ಮಾಡಲಾಗಿದೆ.
ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿ ಈಶ್ವರಪ್ಪ ಅವರು ಮೋದಿ ಫೋಟೋ ಬಳಸಿದ್ದಕ್ಕೆ ದೂರು ನೀಡಿದ ಬಳಿಕ ಛಲವಾದಿ ನಾರಾಯಣಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಈಶ್ವರಪ್ಪ ಮೋದಿ ಫೋಟೋ ಪ್ರಚಾರಕ್ಕೆ ಬಳಸುತ್ತಿದ್ದಾರೆ. ಮೋದಿ ಭಾವಚಿತ್ರವನ್ನ ಬಳಸದಂತೆ ದೂರು ನೀಡಿದ್ದೇವೆ. ಈಶ್ವರಪ್ಪ ಪಕ್ಷದ ಅಭ್ಯರ್ಥಿ ಅಲ್ಲದ ಕಾರಣ ಪಕ್ಷದ ಹೆಸರು ಭಾವಚಿತ್ರ ಬಳಸುವ ಅಧಿಕಾರ ಅವರಿಗೆ ಇರುವುದಿಲ್ಲ. ಈಶ್ವರಪ್ಪ ಹೀಗೆ ಮುಂದುವರೆದರೆ ಕಾನೂನು ಕ್ರಮ ಆಗುತ್ತೆ ಎಂದು ಎಚ್ಚರಿಕೆ ನೀಡಿದರು.
ಮೋದಿ ಫೋಟೋಗಾಗಿ ಈಶ್ವರಪ್ಪ ಕೆವಿಯಟ್ ಅರ್ಜಿ
ತಮ್ಮ ಪುತ್ರ ಕಾಂತೇಶ್‌ಗೆ ಹಾವೇರಿ ಬಿಜೆಪಿ ಟಿಕೆಟ್ ನೀಡದ್ದರಿಂದ ಬಂಡಾಯವೆದ್ದಿರುವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಬಿವೈ ರಾಘವೇಂದ್ರ ಎದುರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಪ್ರಚಾರದಲ್ಲಿ ಬಿಜೆಪಿ ಚಿಹ್ನೆ ಹೊರತುಪಡಿಸಿ ಮೋದಿ ಭಾವಚಿತ್ರವನ್ನು ಈಶ್ವರಪ್ಪ ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಅವರು ಈಶ್ವರಪ್ಪ ವಿರುದ್ಧ ವ್ಯಂಗ್ಯವಾಡಿದ್ದರು. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಅವರಿಗೆ ತಿರುಗೇಟು ನೀಡಿದ್ದ ಈಶ್ವರಪ್ಪ, ಮೋದಿ ಅವರಪ್ಪನ ಆಸ್ತಿಯೇ, ಮೋದಿ ಭಾವಚಿತ್ರವನ್ನು ಯಾರಾದರೂ ಬಳಸಬಹುದು ಎಂದು ಹೇಳಿದ್ದರು. ಅಲ್ಲದೇ ಮೋದಿ ಫೋಟೋ ಬಳಕೆಗಾಗಿ ಕೋರ್ಟ್ ಗೆ ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ.