ಮೈಸೂರು : ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗ ಬೃಹತ್ ರಂಗೊಲಿ ಬಿಡಿಸಿ ಸುತ್ತಲೂ ಮಣ್ಣಿನ ಹಣತೆ, ಕ್ಯಾಂಡಲ್ ಬೆಳಗುವ ಮೂಲಕ ನಂಜನಗೂಡು ತಾಲ್ಲೂಕು ಪಂಚಾಯಿತಿ ಸ್ವೀಪ್ ಸಮಿತಿಯು ಅಪಾರ ಭಕ್ತರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
ಎನ್ ಆರ್ ಎಲ್ ಎಂ ಸಂಘದ ಮಹಿಯರು ದೇಗುಲದ ಮುಂಭಾಗ ರಂಗೋಲಿಯಲ್ಲಿ ಬಿಡಿಸಿದ್ದ ಇ.ವಿ.ಎಂ ಯಂತ್ರ, ತೋರು ಬೆರಳಿಗೆ ಶಾಹಿ ಗುರುತು, ಮತದಾನ ಕುರಿತ ಘೋಷವಾಕ್ಯಗಳು ನೆರದಿದ್ದ ಭಕ್ತರ ಗಮನ ಸೆಳೆಯಿತು.
ರಂಗೋಲಿ ಸುತ್ತಲೂ ಮಣ್ಣಿನ ಹಣತೆ, ಕ್ಯಾಂಡಲ್ ಬೆಳಗಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಜಗನಾಥ್ ಮೂರ್ತಿ, ಸದೃಢ ಸಮಾಜ ನಿರ್ಮಿಸಲು ಪ್ರತಿಯೊಬ್ಬರ ಮತವು ಅತ್ಯಗತ್ಯ. ಸಂವಿಧಾನಿಕ ಮತದಾನದ ಹಕ್ಕನ್ನು ಯಾರೊಬ್ಬ ಅರ್ಹರು ಬಿಟ್ಟುಕೊಡಬಾರದು. ಏಪ್ರಿಲ್ 26 ರಂದು ನಿಮ್ಮ ನಿಮ್ಮ ಮತಗಟ್ಟೆಗಳತ್ತ ಹೆಜ್ಜೆ ಹಾಕಿ ಎಂದರು.
ಬಳಿಕ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಮಾತನಾಡಿ, ಚುನಾವಣೆಯು ಒಂದು ಹಬ್ಬವಿದ್ದಂತೆ, ಪ್ರತಿಯೊಬ್ಬರು ಹಕ್ಕು ಚಲಾಯಿಸಲು ಉತ್ಸುಕತೆ ತೋರಬೇಕು. ಮತಹಾಕುವ ಮೂಲಕ ಹಬ್ಬ ಆಚರಿಸಬೇಕು ಎಂದು ಕರೆ ನೀಡಿದರು. ಬಳಿಕ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.