ಬೆಂಗಳೂರು: ಈ ವರ್ಷ ಕಾರಣಾಂತರಗಳಿಂದ ನಾನು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ, ಹೀಗಾಗಿ ತಾವೆಲ್ಲರೂ ಇದ್ದಲ್ಲಿಯೇ ಹಾರೈಸಬೇಕು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಪತ್ರ ಬರೆದು ಎಂದು ಮನವಿ ಮಾಡಿಕೊಂಡಿದ್ದಾರೆ.
ಎಚ್ ಡಿ ದೇವೇಗೌಡ ಅವರು ಇದೇ ಮೇ 18ಕ್ಕೆ 91 ವರ್ಷ ಪೂರೈಸಿ 92ನೇ ವಸಂತಕ್ಕೆ ಕಾಲಿಡಲಿದ್ದಾರೆ. ಆದರೆ, ಈ ಬಾರಿ ಕಾರಣಾಂತರಗಳಿಂದ ಅವರು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ತಾವೆಲ್ಲರೂ ಇದ್ದಲ್ಲಿಯೇ ಹಾರೈಸಬೇಕು ಎಂದು ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ವಿನಂತಿಸಿಕೊಂಡಿದ್ದಾರೆ.
ಅಲ್ಲದೇ ಪ್ರಸಕ್ತ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ (ಎನ್ಡಿಎ) ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಹಾಗೂ ಪಕ್ಷದ ಸಂಘಟನೆಗೆ ಪ್ರತಿಯೊಬ್ಬರೂ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಪ್ರಮುಖವಾಗಿ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರಿಗೆ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಬಹಳಷ್ಟು ಚಿಂತೆಯಾಗಿದೆ. ಅಶ್ಲೀಲ ವಿಡಿಯೋ ಹಾಗೂ ರೇವಣ್ಣ ಬಂಧನದಿಂದ ದೇವೇಗೌಡರ ಕುಟುಂಬಕ್ಕೆ ಮುಜುಗರು ಉಂಟುಮಾಡಿದೆ. ಒಂದು ಕಡೆ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರೆ, ಮತ್ತೊಂದು ಕಡೆ ರಾಜ್ಯದಲ್ಲಿ ಎಚ್ಡಿ ರೇವಣ್ಣ ಅವರ ಬಂಧನ ಮತ್ತು ಬಿಡುಗಡೆ ಎಚ್ಡಿ ದೇವೇಗೌಡರ ಕುಟುಂಬವನ್ನು ಕಂಗೆಡಿಸಿದ್ದು, ಇಡೀ ದೊಡ್ಡಗೌಡರ ಕುಟುಂಬದಲ್ಲಿ ಆತಂಕ ಛಾಯೆ ಆವರಿಸಿದೆ. ಹೀಗಾಗಿ ಜನ್ಮದಿನದ ಆಚರಣೆಯನ್ನು ರದ್ದು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.














