ಮನೆ ಕಾನೂನು ಸಾರ್ವಜನಿಕರ ರಕ್ಷಣೆ ಬಹಳ ದೊಡ್ಡ ಜವಾಬ್ದಾರಿ: ಎಡಿಜಿಪಿ ಅಲೋಕ್ ಕುಮಾರ್

ಸಾರ್ವಜನಿಕರ ರಕ್ಷಣೆ ಬಹಳ ದೊಡ್ಡ ಜವಾಬ್ದಾರಿ: ಎಡಿಜಿಪಿ ಅಲೋಕ್ ಕುಮಾರ್

0

ಮೈಸೂರು(Mysuru): ರಾಜಕೀಯ ಕಾರಣದಿಂದಾಗಲಿ, ಮತೀತ ಕಾರಣದಿಂದಾಗಲಿ ಯಾವುದೇ ಬೇಧಬಾವ ಮಾಡದೆ ಸಾರ್ವಜನಿಕರನ್ನು ಹಾಗೂ ಅವರ ಆಸ್ತಿಪಾಸ್ತಿಗಳನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಪಾಲಾಗಿದ್ದು, ಯಾವುದೇ ಸಂದರ್ಭದಲ್ಲಿಯೂ ನಿಮ್ಮ ಮನಸ್ಸು ಗಟ್ಟಿಯಾಗಿ ನಿಲ್ಲಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದರು.

ಗುರುವಾರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ನಡೆದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಮೈಸೂರಿನ 5 ನೇ ಪಡೆ ಮತ್ತು ತುಮಕೂರಿನ 12 ನೇ ಪಡೆ ವಿಶೇಷ ಮೀಸಲು ಪೊಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ನಿಮ್ಮ ಬದುಕಿನಲ್ಲಿ ಬಹಳ ವಿಶೇಷ ಹಾಗೂ ವಿಶಿಷ್ಟವಾದ ದಿನ. ಇಂದಿನಿಂದ ನಿಮ್ಮ ವೃತ್ತಿ ಜೀವನದಲ್ಲಿ ಕಾಲಿಡುವ ಮೂಲಕ ಬಹಳ ದೊಡ್ಡದಾದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಕ್ಷಣ ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳುವ ಸಮಯ ಇದಾಗಿದೆ ಎಂದರು.

ಇಂದಿನಿಂದ ನಿಮಗೆ ಹಲವಾರು ಸಮಸ್ಯೆಗಳು  ಬರುತ್ತದೆ. ಇದಕ್ಕಾಗಿ ನಿಮಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಮನಸ್ಸು ಹಾಗೂ ದೇಹ ಗಟ್ಟಿಯಾಗಿ ಇರಬೇಕು ಎಂದು ಸಲಹೆ ನೀಡಿದರು.

ಕೆ.ಎಸ್.ಆರ್.ಪಿಯ 5ನೇ ಕಮಾಂಡೆಟ್ ಜನಾರ್ಧನ್ ಅವರು ಮಾತನಾಡಿ, ಪ್ರಶಿಕ್ಷಾಣಾರ್ಥಿಗಳಿಗೆ ಹಲವಾರು ವಿಷಯಗಳ ಬಗ್ಗೆ ತಜ್ಞರಿಂದ ತರಬೇತಿ ನೀಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ತರಬೇತಿ ಸಂದರ್ಭದಲ್ಲಿ ಉತ್ತಮ ಸಾಧನೆ ತೋರಿದ ತುಮಕೂರು ಪಡೆಯ ಸತೀಶ್, ಮನುಕುಮಾರ್, ಬಿ.ಎಸ್.ಶಿವಕುಮಾರ, ಕೆ.ಆರ್.ಭರತ್ ನಾಯಕ್, ನಂದೀಶ್ ಒಡೆಯರ್, ಆರ್.ಕಿರಣ್, ಯಲ್ಲಪ್ಪ ಕೋಕಟಿ, ಶಿವಬಸ್ಸಪ್ಪ ಹಾಗೂ ಮೈಸೂರು ಪಡೆಯ ಎಸ್.ವೈ.ಕುಮಾರ ಸ್ವಾಮಿ, ಬಿ.ರಾಘವೇಂದ್ರ, ಅಮೀತ್ ಲಗಮಣ್ಣಾ ತುಕ್ಕಾನಟ್ಟಿ ಸೇರಿದಂತೆ ಇತರರಿಗೆ ಪ್ರಶಸ್ತಿ ನೀಡುವುದರ ಜೊತೆಗೆ ವಾರ್ತಾ ಪತ್ರಿಕೆಯನ್ನು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಡಿಐಜಿ ರಾಮಕೃಷ್ಣ ಪ್ರಸಾದ್, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಆರ್.ಚೇತನ್ ಸೇರಿದಂತೆ ಇತರರು ಹಾಜರಿದ್ದರು.