ಮನೆ ಕ್ರೀಡೆ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್:‌ ಚಿನ್ನ ಗೆದ್ದ ಭಾರತದ ನಿಖತ್ ಜರೀನ್‌

ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್:‌ ಚಿನ್ನ ಗೆದ್ದ ಭಾರತದ ನಿಖತ್ ಜರೀನ್‌

0

ನವದೆಹಲಿ(New Delhi)-ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಫ್ಲೈವೇಟ್ (52ಕೆಜಿ) ವಿಭಾಗದಲ್ಲಿ ಭಾರತದ ನಿಖತ್ ಜರೀನ್‌ (Nikhat Zareen) ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಆ ಮೂಲಕ ಈ ಸಾಧನೆ ಮಾಡಿದ ಭಾರತದ ಐದನೇ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭಾರತಕ್ಕೆ ಈ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ವರ್ಷಗಳ ನಂತರ ಒಲಿದ ಚಿನ್ನ ಇದಾಗಿದೆ. 2018ರಲ್ಲಿ ಮೇರಿ ಕೋಮ್ (48ಕೆಜಿ) ಚಿನ್ನ ಗೆದ್ದ ನಂತರ ಯಾರೂ ಜಯಿಸಿರಲಿಲ್ಲ.

ಫೈನಲ್‌ನಲ್ಲಿ ಅವರು 5–0 ಯಿಂದ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜೂಟಾಮಸ್‌ ವಿರುದ್ಧ ಗೆದ್ದು ಪದಕಕ್ಕೆ ಕೊರಳೊಡ್ಡಿದರು. ಈ ಟೂರ್ನಿಯುದ್ದಕ್ಕೂ ಅವರು ತಮ್ಮ ಎಲ್ಲ ಎದುರಾಳಿಗಳನ್ನು ಹಿಮ್ಮೆಟ್ಟಿಸಿ ಫೈನಲ್ ತಲುಪಿದ್ದರು.

ಪ್ರಶಸ್ತಿ ಸುತ್ತಿನಲ್ಲಿ ಅವರು 30-27, 29-28, 29-28, 30-27, 29-28 ರಿಂದ ಥಾಯ್ಲೆಂಡ್ ಬಾಕ್ಸರ್‌ ಎದುರು ಮೇಲುಗೈ ಸಾಧಿಸಿದರು.

ಮೇರಿ ಕೋಮ್ ಆರು ಸಲ (2002, 2005, 2006, 2008, 2010 ಮತ್ತು 2018) ಚಿನ್ನದ ಜಯಿಸಿದ್ದರು. ಸರಿತಾ ದೇವಿ (2006), ಆರ್‌.ಎಲ್. ಜೆನಿ (2006) ಮತ್ತು ಕೆ.ಸಿ. ಲೇಖಾ (2006) ತಲಾ ಒಂದು ಬಾರಿ ಈ ಟೂರ್ನಿಯಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಇದೀಗ ನಿಖತ್ ಅವರ ಸಾಲಿಗೆ ಸೇರಿದ್ದಾರೆ.

2019ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು, ಕಳೆದ ಫೆಬ್ರವರಿಯಲ್ಲಿ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿಯಲ್ಲಿ ಎರಡು ಚಿನ್ನದ ಪದಕಗಳನ್ನು ಜಯಿಸಿದ ದಾಖಲೆ ಮಾಡಿದ್ದರು.

ಮನೀಷಾಗೆ ಕಂಚು: ಈ ಚಾಂಪಿಯನ್‌ಷಿಪ್‌ನಲ್ಲಿ ಮನೀಷಾ ಮೌನ್ (57ಕೆಜಿ) ಮತ್ತು ಪರ್ವೀನ್ ಹೂಡಾ (63ಕೆಜಿ) ಕಂಚಿನ ಪದಕ ಗಳಿಸಿದರು.