ಮನೆ ಕಾನೂನು ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕೆ ಸ್ಥಳ ಕೋರಿದ್ದ ಪಿಐಎಲ್‌ ವಜಾಗೊಳಿಸಿದ ಹೈಕೋರ್ಟ್‌

ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕೆ ಸ್ಥಳ ಕೋರಿದ್ದ ಪಿಐಎಲ್‌ ವಜಾಗೊಳಿಸಿದ ಹೈಕೋರ್ಟ್‌

0

ಕನ್ನಡ ಚಿತ್ರರಂಗದ ಖ್ಯಾತ ನಟ ದಿವಂಗತ ಡಾ.ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಅವರ ಸ್ಮಾರಕ ನಿರ್ಮಾಣ ಮಾಡಲು 10 ಗುಂಟೆ ಜಾಗವನ್ನು ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

Join Our Whatsapp Group

ಬೆಂಗಳೂರಿನ ವಿ ಎಸ್ ಎಸ್ ಅಭಿಮಾನ್, ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಡಾ.ವಿಷ್ಣುವರ್ಧನ್‌ಅವರು ಕನ್ನಡ ಚಿತ್ರರಂಗದ ಮೇರು ನಟರಾಗಿದ್ದು, ಅವರು ಗಣನೀಯ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರನ್ನು ಅನೇಕ ಮಂದಿ ಆರಾಧಿಸುತ್ತಾರೆ. ಹೀಗಾಗಿ, ನಟ ಹುಟ್ಟಿದ ಹಾಗೂ ದೈವಾಧೀನರಾದ ದಿನದಂದು ಅವರಿಗೆ ಪೂಜೆ ಮಾಡುವ ಮೂಲಕ ಗೌರವ ಸಲ್ಲಿಸುವುದು ನಮ್ಮ ಅಭಿಲಾಷೆ. ಇದನ್ನು ಪರಿಗಣಿಸಿ ಅವರ ಅಂತ್ಯಕ್ರಿಯೆ ನಡೆದ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ ಮೈಲಸಂದ್ರ ಗ್ರಾಮದ ಸರ್ವೇ ನಂಬರ್ 26ರ ಅಭಿಮಾನ್‌ ಸ್ಟುಡಿಯೋದವರಿಗೆ ಮಂಜೂರಾದ 10 ಗುಂಟೆ ಜಾಗವನ್ನು ವಿಷ್ಣುವರ್ಧನ್‌ ಅವರ ಸ್ಮಾರಕ ಭವನ ನಿರ್ಮಾಣ ಮಾಡಲು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಈ ರೀತಿ ಸಿನಿಮಾ ತಾರೆಯರ ಸ್ಮಾರಕ ನಿರ್ಮಿಸುವಂತೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದು ಸೂಕ್ತವಲ್ಲ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಬೇಕಿದ್ದಲ್ಲಿ ಸರ್ಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಹೇಳಿ ಅರ್ಜಿ ವಜಾಗೊಳಿಸಿದೆ.

ದಿವಂಗತ ಡಾ.ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ನೇರವೇರಿಸಿದ ಜಾಗದೊಂದಿಗೆ ಅವರ ಅಭಿಮಾನಿಗಳೂ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಆ ಜಾಗವನ್ನು ಪುಣ್ಯಭೂಮಿ ಎಂದು ಕರೆಯುತ್ತಾರೆ. ಈ ನಿಟ್ಟಿನಲ್ಲಿ ಅರ್ಜಿಯನ್ನು ಪರಿಗಣಿಸಬೇಕು ಎಂದು ಕೋರಿದರು.

ಈ ವೇಳೆ ಪೀಠವು ಅರ್ಜಿಯಲ್ಲಿ ಯಾವುದೇ ತೆರನಾದ ಸಾರ್ವಜನಿಕ ಹಿತಾಸಕ್ತಿ ಕಾಣಿಸುತ್ತಿಲ್ಲ. ಹೈಕೋರ್ಟ್‌ ಈ ಕುರಿತು ವ್ಯವಹರಿಸಲಾಗದು. ಈ ಅರ್ಜಿಗೆ ಅಧಿಕ ದಂಡ ವಿಧಿಸಬಹುದು. ಆದರೆ, ತಾಳ್ಮೆಯಿಂದಲೇ ಅರ್ಜಿಯನ್ನು ವಜಾಗೊಳಿಲಾಗುತ್ತಿದೆ ಎಂದು ಖಾರವಾಗಿದೆ ಹೇಳಿದೆ.