ದೇಶಕ್ಕೆ ಸ್ವಾತಂತ್ರ್ಯ ದೊರೆತು ಸರಿಸುಮಾರು 77 ವರ್ಷಗಳ ಬಳಿಕ, ಅಪರಾಧ ನ್ಯಾಯ ವ್ಯವಸ್ಥೆ ಈಗ ಸಂಪೂರ್ಣ ಸ್ವದೇಶಿಯಾಗಿದ್ದು, ಭಾರತೀಯ ತತ್ವ ಮತ್ತು ಮೌಲ್ಯಗಳ ಆಧಾರದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಮೂರು ನೂತನ ಅಪರಾಧಿಕ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಸೋಮವಾರದಿಂದ ಜಾರಿಗೆ ಬಂದ ಹಿಣ್ನೆಲೆಯಲ್ಲಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಹೊಸ ಅಪರಾಧಿಕ ಕಾನೂನುಗಳಿಂದಾಗಿ ದಾಖಲಾದ 3 ವರ್ಷಗಳಲ್ಲಿ ಪ್ರಕರಣ ಇತ್ಯರ್ಥವಾಗಲಿವೆ ಎಂದು ಅವರು ತಿಳಿಸಿದರು.
ಎಲ್ಲಾ ಮೂರು ಕಾನೂನುಗಳು ಸಂಪೂರ್ಣವಾಗಿ ಜಾರಿಗೆ ಬಂದ ಬಳಿಕ, ಎಫ್‌ಐಆರ್ ದಾಖಲಿಸುವುದರಿಂದ ಹಿಡಿದು ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಪಡೆಯುವವರೆಗೆ 3 ವರ್ಷಗಳಿಗಿಂತ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ಬ್ರಿಟಿಷರ ಕಾಲದಲ್ಲಿ ಜಾರಿಗೊಳಿಸಲಾಗಿದ್ದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯಿದೆಯ ಬದಲಿಗೆ ಈ ಮೂರು ಕಾನೂನುಗಳು ಜಾರಿಯಾಗಿವೆ ಎಂದು ಅವರು ಮಾಹಿತಿ ನೀಡಿದರು.
ಈ ಕಾನೂನುಗಳು ನ್ಯಾಯ, ತ್ವರಿತ ವಿಚಾರಣೆ ಮತ್ತು ಸಂತ್ರಸ್ತರ ಮತ್ತು ದೂರುದಾರರ ಹಕ್ಕುಗಳಿಗೆ ರಕ್ಷಣೆ ನೀಡುತ್ತವೆ. ಹೊಸ ದೃಷ್ಟಿಕೋನದಿಂದ ಇವುಗಳನ್ನು ಜಾರಿಗೊಳಿಸಲಾಗಿದೆ ಎಂದರು. ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದ ದೇಶದ್ರೋಹ ಸೆಕ್ಷನ್ ಬದಲಿಗೆ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 150 ರ ಬಗ್ಗೆಯೂ ಅವರು ಮಾತನಾಡಿದರು.
“ದೇಶದ್ರೋಹ ಎಂಬುದು ಬ್ರಿಟಿಷರು ತಮ್ಮ ಆಳ್ವಿಕೆ ರಕ್ಷಿಸಲು ಮಾಡಿದ ಕಾನೂನಾಗಿತ್ತು. ಮಹಾತ್ಮ ಗಾಂಧಿ, ತಿಲಕ್ ಸರ್ದಾರ್ ಪಟೇಲ್ ಈ ಕಾನೂನಿನ ಅಡಿಯಲ್ಲಿ 6 ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಈ ಸೆಕ್ಷನ್‌ನಡಿ ಕೇಸರಿಯನ್ನೂ ನಿಷೇಧಿಸಲಾಯಿತು. ಆದರೆ ಈಗ ನಾವು ದೇಶದ್ರೋಹದ ಕಾನೂನನ್ನು ರದ್ದುಗೊಳಿಸಿದ್ದು ಅದರ ಜಾಗದಲ್ಲಿ ದೇಶ ವಿರೋಧಿ ಚಟುವಟಿಕೆಗೆ ಕಡಿವಾಣ ಹಾಕಲು ಹೊಸ ಸೆಕ್ಷನ್ ತಂದಿದ್ದೇವೆ… ನಾವು ದೇಶದ್ರೋಹ ಸೆಕ್ಷನ್ ಸಂಪೂರ್ಣವಾಗಿ ತೆಗೆದು ಹಾಕಿದ್ದೇವೆ. ಈ ಹಿಂದೆ ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು ಅಪರಾಧವಾಗಿತ್ತು. ಈ ಕಾನೂನು ಅತ್ಯಾಧುನಿಕ ನ್ಯಾಯ ವ್ಯವಸ್ಥೆಯನ್ನು ರೂಪಿಸಲಿದೆ’’ ಎಂದು ಅವರು ಹೇಳಿದರು.
ಸಂವಿಧಾನದ ಎಂಟನೇ ಪರಿಚ್ಛೇದದ ಅಡಿಯ ಭಾಷೆಗಳಲ್ಲಿ ಈಗ ನ್ಯಾಯಾಂಗ ಪ್ರಕ್ರಿಯೆಯ ಮಾಹಿತಿ ದೊರೆಯಲಿದೆ ಎಂದರು.
ಹೊಸ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಮೊದಲ ಪ್ರಕರಣವನ್ನು ಮಧ್ಯಪ್ರದೇಶದಲ್ಲಿ ದಾಖಲಿಸಲಾಗಿದೆ. ಬೀದಿಬದಿ ವ್ಯಾಪಾರಿಯೊಬ್ಬರ ವಿರುದ್ಧ ದಾಖಲಿಸಲಾಗಿತ್ತು ಎಂಬುದು ಸುಳ್ಳು ಮಾಹಿತಿ ಎಂದರು.
ವಿವಿಧ ಸಂಸತ್ ಸದಸ್ಯರನ್ನು ಅಮಾನತುಗೊಳಿಸಿರುವ ಸಂದರ್ಭದಲ್ಲಿ ಕಾನೂನು ಜಾರಿಗೆ ತರಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪ ಕೂಡ ಸತ್ಯಕ್ಕೆ ದೂರವಾದದ್ದು ಎಂದು ಅವರು ಹೇಳಿದರು.
“ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಲೋಕಸಭೆಯಲ್ಲಿ 9 ಗಂಟೆ 29 ನಿಮಿಷ ಚರ್ಚೆ ನಡೆದಿತ್ತು. ಅದರಲ್ಲಿ 34 ಸದಸ್ಯರು ಭಾಗವಹಿಸಿದ್ದರು. ರಾಜ್ಯಸಭೆಯಲ್ಲಿ 6 ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆದಿತ್ತು. ಚರ್ಚೆಯಲ್ಲಿ 40 ಸದಸ್ಯರು ಭಾಗವಹಿಸಿದ್ದರು… ವ್ಯವಹಾರ ಸಲಹಾ ಸಮಿತಿಯ ಮುಂದೆ ಅದಾಗಲೇ ಮಸೂದೆಯನ್ನು ಪಟ್ಟಿ ಮಾಡಲಾಗಿತ್ತು, ವಿರೋಧ ಪಕ್ಷಗಳು ಆ ಹೊತ್ತಿಗೆ ಸಂಸತ್ತನ್ನು ಬಹಿಷ್ಕರಿಸಲು ಮುಂದಾಗಿದ್ದವು ಎಂದು ನಾನು ಬಲವಾಗಿ ನಂಬಿದ್ದೇನೆ, ಬಹುಶಃ ಚರ್ಚೆಯಲ್ಲಿ ಭಾಗವಹಿಸಲು ಅವರಿಗೆ ಇಷ್ಟವಿರಲಿಲ್ಲ” ಎಂದರು.
ವಿರೋಧ ಪಕ್ಷದ 97 ಸಂಸದರು ಅಮಾನತಗೊಂಡಿದ್ದ ವೇಳೆ ಲೋಕಸಭೆಯಲ್ಲಿ ಮೂರು ಹೊಸ ಕ್ರಿಮಿನಲ್ ಮಸೂದೆಗಳನ್ನು ಜಾರಿಗೆ ತರಲಾಗಿತ್ತು.
ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಸರ್ಕಾರ ಸೆಕ್ಷನ್‌ಗಳು ಮತ್ತು ಅಧ್ಯಾಯಗಳಿಗೆ ಆದ್ಯತೆ ನೀಡಿದೆ ಎಂದು ಶಾ ಹೇಳಿದರು. ಈ ಬದಲಾವಣೆ ಬಹಳ ಸಮಯದಿಂದ ಬಾಕಿ ಉಳಿದಿತ್ತು. 35 ಸೆಕ್ಷನ್‌ಗಳು ಮತ್ತು 13 ನಿಬಂಧನೆಗಳಿರುವ ಸಂಪೂರ್ಣ ಅಧ್ಯಾಯವೊಂದನ್ನು ಸೇರಿಸಲಾಗಿದೆ ಎಂದು ಅವರು ವಿವರಿಸಿದರು.
ಇದೀಗ ಸಾಮೂಹಿಕ ಅತ್ಯಾಚಾರಕ್ಕೆ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುವುದು. ಅಪ್ರಾಪ್ತ ವಯಸ್ಕರ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸಲಾಗುತ್ತದೆ, ಗುರುತನ್ನು ಮರೆಮಾಚುವ ಅಥವಾ ಸುಳ್ಳು ಭರವಸೆ ನೀಡುವ ಮೂಲಕ ಲೈಂಗಿಕ ಶೋಷಣೆಗೆ ಪ್ರತ್ಯೇಕ ಅಪರಾಧವನ್ನು ವ್ಯಾಖ್ಯಾನಿಸಲಾಗಿದೆ. ಹೇಳಿಕೆ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರನ್ನು ಮುಜಗರದಿಂದ ರಕ್ಷಿಸಲು ಸಂತ್ರಸ್ತೆ ತನ್ನ ಮನೆಯಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಅವರ ಸ್ವಂತ ಕುಟುಂಬದವರ ಸಮ್ಮುಖದಲ್ಲಿ, ಆನ್‌ಲೈನ್ ಎಫ್‌ಐಆರ್ ದಾಖಲಿಸುವ ಸೌಲಭ್ಯವನ್ನು ಸಹ ಒದಗಿಸಲಾಗಿದೆ ಎಂದು ಅವರು ಹೇಳಿದರು.