ಮೈಸೂರು(Mysuru): ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಮೇಲೆ ನಗರ ಹಾಗೂ ಜಿಲ್ಲೆಯಾದ್ಯಂತ ಭಾನುವಾರ ಏಕಕಾಲಕ್ಕೆ ದಾಳಿ ನಡೆಸಿರುವ ಜಿಲ್ಲಾ ಪೊಲೀಸರು 20ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಜಿಲ್ಲೆಯ ಎಲ್ಲ ತಾಲ್ಲೂಕುಗಳು, ಹೋಬಳಿಗಳು ಹಾಗೂ ಠಾಣಾ ವ್ಯಾಪ್ತಿಗಳಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ಮಧ್ಯಾಹ್ನ ಆರಂಭವಾದ ಕಾರ್ಯಾಚರಣೆಯಲ್ಲಿ ಸಂಜೆ ಹೊತ್ತಿಗೆ 20ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಸಿಂಧೂವಳ್ಳಿಯಲ್ಲಿ ಹಾಗೂ ರಮ್ಮನಹಳ್ಳಿಯಲ್ಲಿ ಕಾರ್ಯಾಚರಣೆ ಕೈಗೊಂಡು ರಾಜೇಶ್ ಹಾಗೂ ವೆಂಕಟೇಶ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ 38 ಪೌಚ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಇದುವರೆಗೆ ಏಕಕಾಲಕ್ಕೆ ಪೊಲೀಸರು ಕಾರ್ಯಾಚರಣೆ ಕೈಗೊಂಡ ಉದಾಹರಣೆಗಳು ಇರಲಿಲ್ಲ. ಮುಂದೆ ಇನ್ನಷ್ಟು ಇಂತಹ ದಾಳಿ ನಡೆಸಲು ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸೂಚನೆ ನೀಡಿದ್ದಾರೆ.