ಹುಣಸೂರು: ವಾರದಿಂದ ಬೀಳುತ್ತಿರುವ ಜಡಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದೆ. ಮನೆಯೊಂದರ ಮೇಲೆ ತೆಂಗಿನ ಮರ ಬಿದ್ದಿದೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಬೆಳೆಗಳಿಗೂ ಹಾನಿಯಾಗಿದೆ.
ದಿನವಿಡಿ ಸುರಿಯುತ್ತಿರುವ ಮಳೆಯಿಂದಾಗಿ ಜನರ ಓಡಾಟಕ್ಕೆ, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಪರದಾಡುವಂತಾಗಿದೆ. ಜನರು ಮನೆಯಿಂದ ಹೊರ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರ ಪಾಡು ಹೇಳುವಂತಿಲ್ಲಾ. ಬೀದಿ ಬದಿ ವ್ಯಾಪಾರಿಗಳ ಗೋಳು ಹೇಳಲಾಗದು. ಜಾನುವಾರುಗಳ ಮೇವಿಗಾಗಿ ಪರದಾಡುತ್ತಿವೆ. ಮಳೆ ಹೀಗೆ ಮುಂದುವರಿದರೆ ತಂಬಾಕು, ಶುಂಠಿ ಮತ್ತಿತರ ಬೆಳೆ ನಷ್ಟವಾಗುವ ಸಂಭವವಿದೆ.
ಕೊಡಗಿನಲ್ಲಿ ಬೀಳುತ್ತಿರುವ ಅಪಾರ ಮಳೆಯಿಂದಾಗಿ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಹನಗೋಡು ಅಣೆಕಟ್ಟಿನ ಮೇಲೆ 4 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಮನೋಹರ ದೃಶ್ಯ ಸೃಷ್ಟಿಸಿದೆ.
ನದಿ ನೀರು ಹರಿವಿನ ವೈಭವವನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಣೆಕಟ್ಟಿನಿಂದ ಮುಖ್ಯ ಕಾಲುವೆಗೆ 300 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಅಣೆಕಟ್ಟೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಮಳೆ ಹೀಗೆ ಮುಂದುವರಿದಲ್ಲಿ ನದಿಯಲ್ಲಿ ಪ್ರವಾಹ ಹೆಚ್ಚಾಗಲಿದೆ ಎಂದು ಹನಗೋಡು ಕಾವೇರಿ ನೀರಾವರಿ ನಿಗಮದ ಉಪ ವಿಭಾಗದ ಕಚೇರಿಯ ಎಇಇ ಅಶೋಕ್ ತಿಳಿಸಿದ್ದಾರೆ.
150 ಮಿ.ಮೀ.ಮಳೆ:
ಜು.10 ರಿಂದ ಈವರೆಗೆ 150 ಮಿ.ಮೀ. ನಷ್ಟು ಮಳೆಯಾಗಿದೆ. ಜುಲೈ ತಂಗಳ ವಾಡಿಕೆ ಮಳೆ 114 ಮಿ.ಮೀ ಇದ್ದು, 15 ದಿನದಲ್ಲಿ 83.47ಮಿ.ಮೀ ನಷ್ಟು ಮಳೆಯಾಗಿದೆ. ಮಳೆ ಇಲ್ಲದೆ ಪರಿತಪಿಸುತ್ತಿದ್ದ ತಂಬಾಕು ಬೆಳೆಗಾರರು ಆರಂಭದಲ್ಲಿ ಬಿದ್ದ ಮಳೆಯಿಂದ ಸಂತಸಗೊಂಡಿದ್ದರು. ಆದರೆ ಇದೀಗ ಹೆಚ್ಚು ಮಳೆಯಾಗುತ್ತಿರುವುದರಿಂದಾಗಿ ತಂಬಾಕು ಬೆಳೆಗಾರರಿಗೆ ಭೀತಿ ಎದುರಾಗಿದೆ.