ಮನೆ ರಾಜ್ಯ ʻಕುವೆಂಪುʼ ಅವರಿಗೆ ಅವಮಾನವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಹೊಣೆ: ಸಚಿವ ಬಿ.ಸಿ.ನಾಗೇಶ್

ʻಕುವೆಂಪುʼ ಅವರಿಗೆ ಅವಮಾನವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಹೊಣೆ: ಸಚಿವ ಬಿ.ಸಿ.ನಾಗೇಶ್

0

ಮೈಸೂರು (Mysuru)- ರಾಷ್ಟ್ರಕವಿ ʻಕುವೆಂಪುʼ ಅವರಿಗೆ ಅವಮಾನವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಹೊಣೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (B.C.Nagesh) ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪು ಅವರಿಗೆ ಅವಮಾನವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಹೊಣೆ. ಕಾಂಗ್ರೆಸ್‌ನವರು ಸುಳ್ಳನ್ನು ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಟಿಪ್ಪು, ನಾರಾಯಣ್ ಗುರು, ಭಗತ್ ಸಿಂಗ್, ಬಸವಣ್ಣ ಮೇಲೆ ಸುಳ್ಳು ಹಬ್ಬಿಸಿದರು. ಆ ಸುಳ್ಳುಗಳು ಫೇಲ್ ಆದ ಮೇಲೆ ಕುವೆಂಪು ಅವರನ್ನು ಹಿಡಿದು ಕೊಂಡಿದ್ದಾರೆ. ಅದು ಸಹಾ ಮಿಸ್ ಫೈರ್ ಆಗಿದೆ. ಸಿದ್ದರಾಮಯ್ಯ (Siddaramaiah) ಅವರು ಕುವೆಂಪು ಅವರ ಕ್ಷಮೆ ಯಾಚಿಸಬೇಕು. ಕುವೆಂಪು ಅವರ ನಾಲ್ಕು ಪಾಠವನ್ನು ಸಿದ್ದು ಕೈ ಬಿಟ್ಟಿದ್ದರು. ನಾವು ಅದನ್ನು ಸೇರಿಸುವ ಪ್ರಯತ್ನ ಮಾಡಿದ್ದೇವೆ ಎಂದರು.

ಈ ದೇಶ, ಸಂಸ್ಕೃತಿ ಬಗ್ಗೆ ಮಾತನಾಡಿದನ್ನು ಅವರು ತೆಗೆದು ಹಾಕಿದ್ದಾರೆ. ದಯಮಾಡಿ ಕಾಂಗ್ರೆಸ್ ನಾಯಕರೇ ಪುಸ್ತಕವನ್ನು ಓದಿ. ಕಂಟೆಂಟ್ ಇಟ್ಟುಕೊಂಡು ವಾದ ಮಾಡಿ. ಅದು ಬಿಟ್ಟು ವ್ಯಕ್ತಿಗತವಾಗಿ ವಾದ ಮಾಡಬೇಡಿ ಅದು ಸರಿಯಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಶಿಕ್ಷಣ ಇಲಾಖೆಯನ್ನು ಮತ ಬ್ಯಾಂಕ್ ಮಾಡಿತ್ತು. ಅದಕ್ಕಾಗಿ ಪಠ್ಯದಲ್ಲಿ ತಪ್ಪುಗಳಾಗಿತ್ತು ಎಂದು ನಾಗೇಶ್ ಕಿಡಿಕಾರಿದರು. ಇದೇ ವೇಳೆ ಟಿಪ್ಪು ವಿರುದ್ದ ವಾಗ್ದಾಳಿ ನಡೆಸಿದ ಬಿ. ಸಿ. ನಾಗೇಶ್, ಅವನೊಬ್ಬನೇನಾ ಸ್ವಾತಂತ್ರ್ಯ ಹೋರಾಟಗಾರ? ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಇರಲಿಲ್ಲವಾ? ಮೈಸೂರು ಮಹಾರಾಜರಿಗೆ ಅನ್ಯಾಯವಾಗಿದ್ದರೆ ಅದು ಹೈದರಾಲಿ ಹಾಗೂ ಟಿಪ್ಪುವಿನಿಂದ.. ಇದೇ ಟಿಪ್ಪುವಿನಿಂದ ಕನ್ನಡಕ್ಕೆ ಅನ್ಯಾಯವಾಗಿದೆ. ಪರ್ಷಿಯನ್ ಭಾಷೆ ಏಕೆ ತರಬೇಕಾಗಿತ್ತು? ನಾವು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಪುಸ್ತಕ ರಚನೆ ಮಾಡಿದ್ದೇವೆ. ತಪ್ಪುಗಳನ್ನು ಪಠ್ಯದಲ್ಲಿ ಹಾಕೋದು ಸರಿಯಲ್ಲ ಎಂದರು.

ಪಠ್ಯದಲ್ಲಿ ಕೇಸರೀಕರಣ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿ. ಸಿ. ನಾಗೇಶ್, ಕಾಂಗ್ರೆಸ್‌ ಕನ್ನಡಕದಿಂದ ಆ ರೀತಿ ಕಾಣುತ್ತಿರಬಹುದು. ನನ್ನ ಕನ್ನಡಕದಲ್ಲಿ ಯಾವುದೇ ಬಣ್ಣ ಕಾಣುತ್ತಿಲ್ಲ. ನಮಗೆ ಕಮ್ಯುನಿಸ್ಟ್ ಅಥವಾ ಬೇರೆ ಬಣ್ಣ ಕಾಣಲ್ಲ. ಟಿಪ್ಪು ಸುಲ್ತಾನ್ ಪುಸ್ತಕ ತಂದರೂ ನಮಗೆ ಬಣ್ಣ ಕಾಣಲಿಲ್ಲ. ನಮಗೆ ಮಕ್ಕಳು ಮಾತ್ರ ಕಾಣಿಸುತ್ತಾರೆ. ಕಾಂಗ್ರೆಸ್ ಜೀವನದುದ್ದಕ್ಕೂ ಬಣ್ಣ ಕಂಡಿದೆ. ಮತ ಬಿಟ್ಟು ಬೇರೆ ಏನನ್ನು ಯೋಚನೆ ಮಾಡಿದವರಲ್ಲ. ಹಸಿರು ಬಣ್ಣದವರು ಮತ ಹಾಕಲ್ಲ ಅಂತಾ ಅವರಿಗೆ ಭಯ. ಕಾಂಗ್ರೆಸ್ ಪಕ್ಷದ ಯಾರೂ ಪಠ್ಯ ಪುಸ್ತಕವನ್ನೇ ಓದಿಲ್ಲ. ಇದಕ್ಕೆ ಸಾಕ್ಷಿ ಅವರು ಮಾಡಿರುವ ಟ್ವೀಟ್‌ ಗಳು ಎಂದು ನಾಗೇಶ್ ಕಿಡಿಕಾರಿದರು.

ಸಿದ್ದುಗೆ ದುರಹಂಕಾರ:

ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರ ಮೇಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡುತ್ತಿರುವ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಸಿದ್ದರಾಮಯ್ಯ ಅವರ ದುರಂಹಕಾರವನ್ನು ತೋರಿಸುತ್ತದೆ. ನಾನು ಒಬ್ಬನೇ ಸರಿ, ನಾನು ಮಾಡಿದ್ದೇ ಸರಿ, ನನಗೇ ಎಲ್ಲಾ ಗೊತ್ತಿರೋದು ಎಂಬ ಭಾವನೆ ಅವರಲ್ಲಿದೆ. ಯಾವಾಗಲೂ ಏಕವಚನದಲ್ಲಿ ಮಾತನಾಡುತ್ತಾರೆ. ಇದಕ್ಕೆ ಕಾರಣ ಅವರ ಹಿಂದೆ ಇರುವ ತಂಡ. ಹೀಗಾಗಿ, ಪಾಪ ಸಿದ್ದರಾಮಯ್ಯ ಅವರು ಇದಕ್ಕೆ ಕಾರಣರಲ್ಲ ಎಂದು ನಾಗೇಶ್ ವ್ಯಂಗ್ಯವಾಡಿದರು.