ಬೆಂಗಳೂರು: ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತ ಕುರಿತು ಮಾತನಾಡಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಬಗ್ಗೆ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. “ಹೆಣದ ಮೇಲೆ ರಾಜಕೀಯ ಮಾಡುವ ಕೆಲಸ ಬಿಜೆಪಿಯದು, ಜೆಡಿಎಸ್‌ದು. ನಾವು ಅವರಂತೆ ನೀಚ ರಾಜಕೀಯ ಮಾಡುವುದಿಲ್ಲ” ಎಂದು ಅವರು ತೀವ್ರವಾಗಿ ಕಿಡಿಕಾರಿದರು.
ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಅಹಮದಾಬಾದ್ ವಿಮಾನ ಅಪಘಾತವು ಭಾರತೀಯ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಗಂಭೀರ ಎಚ್ಚರಿಕೆ ನೀಡಿದೆ ಎಂದರು. “ಅಂತಹ ದುರಂತ ದೇಶದಲ್ಲೇ ಅಲ್ಲ, ಪ್ರಪಂಚದಲ್ಲಿಯೂ ನಡೆಯಬಾರದು. ಅಪಘಾತದ ದೃಶ್ಯ ಆಘಾತಕಾರಿ. 500 ಮೀಟರ್ ದೂರ ಮುಂದೆ ವಿಮಾನ ಅಪ್ಪಳಿಸಿದ್ದರೆ ಅಸಂಖ್ಯಾತ ಜೀವಗಳನ್ನು ಕಳೆದುಕೊಳ್ಳಬೇಕಾಗುತ್ತಿತ್ತು” ಎಂದು ಹೇಳಿದರು.
ಅವರು ಈ ಅಪಘಾತದಲ್ಲಿ ಗಾಯಗೊಂಡಿರುವ ವೈದ್ಯಕೀಯ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಬಗ್ಗೆ ಉಲ್ಲೇಖಿಸಿದರು. “ಅವರು ತೀವ್ರ ಭೀತಿಗೊಳಗಾಗಿದ್ದಾರೆ. ಮಾನಸಿಕ ಆಘಾತದಿಂದ ಬಳಲುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯ ನೇತೃತ್ವದಲ್ಲಿ ನಾವು ಆಸ್ಪತ್ರೆಗೆ ಭೇಟಿ ನೀಡಿದ್ದೇವೆ. ಕಾಂಗ್ರೆಸ್ ಪಕ್ಷದಿಂದ ಸಾಂತ್ವನ ತಿಳಿಸಿದ್ದೇವೆ” ಎಂದು ಹೇಳಿದರು.
ವಿಮಾನ ದುರಂತದ ವೇಳೆ ಕಾಂಗ್ರೆಸ್ ಟೀಕೆ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ನಾವು ಬ್ಲ್ಯಾಕ್ ಬಾಕ್ಸ್ ವರದಿ ಎದುರು ನೋಡುತ್ತಿದ್ದೇವೆ. ಸರ್ಕಾರವೇ ತನಿಖೆಗೆ ಆದೇಶ ನೀಡಬೇಕಾಗಿದೆ. ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಹೆಣದ ಮೇಲೆ ರಾಜಕೀಯ ಮಾಡುವುದೇ ಕೆಲಸ. ನಾವು ಹಳೇ ಪ್ರಕರಣ ಹಾಗೂ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಟೀಕೆ ಮಾಡಬಹುದು. ಆದರೆ ನಾವು ಅವರ ಮಟ್ಟಕ್ಕೆ ಇಳಿಯುವುದಿಲ್ಲ.
ಈ ವಿಚಾರದಲ್ಲಿ ಅನೇಕ ತಾಂತ್ರಿಕ ಅಂಶಗಳಿವೆ. ನಾನು ಅವುಗಳ ತಜ್ಞನಲ್ಲ. ಈ ಎಲ್ಲಾ ವಿಚಾರವಾಗಿ ಚರ್ಚೆ ಆಗುತ್ತಿದೆ. ಆದರೆ ಈ ವಿಚಾರವನ್ನು ರಾಜಕೀಯಗೊಳಿಸುವ ವ್ಯಕ್ತಿ ನಾನಲ್ಲ. ಈ ಸಮಯದಲ್ಲಿ ಕೇಂದ್ರ ಸಚಿವರ ಬಗ್ಗೆ ಟೀಕೆ ಮಾಡುವುದಿಲ್ಲ. ಇದು ದೇಶದ ಗಂಭೀರ ವಿಚಾರ ಎಂದಿದ್ದಾರೆ.
ರಾಜ್ಯ ಸರ್ಕಾರ ತೆರಿಗೆ ಹೆಚ್ಚು ವಸೂಲಿ ಮಾಡುತ್ತಿದೆ. “ನನ್ನ ಸರ್ಕಾರವಿದ್ದರೆ ಗೃಹಲಕ್ಷ್ಮಿಗೆ 5 ಸಾವಿರ ರೂ. ಕೊಡುತ್ತಿದ್ದೆ” ಎಂಬ ಹೆಚ್.ಡಿ. ಕುಮಾರಸ್ವಾಮಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, “ಅವರು ಆರೋಗ್ಯಕರವಾಗಿರಲಿ, ಚೆನ್ನಾಗಿರಲಿ” ಎನ್ನುತ್ತಾ ವ್ಯಂಗ್ಯವಾಡಿದರು.