ಮನೆ ಸುದ್ದಿ ಜಾಲ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಯಶಸ್ವಿಗೊಳಿಸುವ ಕುರಿತು ಸಭೆ

ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಯಶಸ್ವಿಗೊಳಿಸುವ ಕುರಿತು ಸಭೆ

0

ಮೈಸೂರು (Mysuru)- ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯೋಗ ನಗರಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಿದ್ಧತೆ ಭರದಿಂದ ಸಾಗುತ್ತಿದೆ.

ಅಂದಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಯೋಗ ಫೆಡರೇಶನ್ ಆಫ್ ಮೈಸೂರು ವತಿಯಿಂದ ಮಾಧ್ಯಮ ಮಿತ್ರರು ಹಾಗೂ ಪತ್ರಿಕಾ ಸಂಪಾದಕರೊಂದಿಗೆ ಪೂರ್ವಭಾವಿ ಸಭೆ ನಡೆಯಿತು.

ಮೈಸೂರಿನ ಜಿಎಸ್‌ಎಸ್ ಯೋಗ ಶಾಲೆಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ವಿವಿಧ ಮಾಧ್ಯಮ ಮಿತ್ರರು ಹಾಗೂ ಪತ್ರಿಕಾ ಸಂಪಾದಕರು ವಿಶ್ವ ಯೋಗ ದಿನಾಚರಣೆಗೆ ಕೆಲ ಸಲಹೆಗಳನ್ನು ನೀಡಿ, ತಮ್ಮ ಅಭಿಪ್ರಾಯ ಹಂಚಿಕೊಂಡರು.

ಯೋಗ ಫೆಡರೇಶನ್ ಆಫ್ ಮೈಸೂರಿನ ಅಧ್ಯಕ್ಷರಾದ ಯೋಗಾತ್ಮ ಶ್ರೀಹರಿ ಮಾತನಾಡಿ, ವಿಶ್ವ ಯೋಗ ದಿನವನ್ನು ಪಕ್ಷಾತೀತವಾಗಿ ನಡೆಸುವ ಉದ್ದೇಶವಿದೆ. ಇದು ಯಾವುದೇ ಒಂದು ಪಕ್ಷ, ವ್ಯವಸ್ಥೆ, ಧರ್ಮಕ್ಕೆ ಸಿಮೀತವಾಗಿರಬಾರದು. ಎಲ್ಲರೂ ಸೇರಿ ಮೈಸೂರನ್ನು ಬ್ರ್ಯಾಂಡ್ ಮಾಡಲು ಮಾಡುತ್ತಿರುವ ತಪಸ್ಸು ಇದು ಎಂದರು.

ಈ ಬಾರಿ ಯೋಗ ದಿನಕ್ಕೆ ಪ್ರಧಾನಿ ಮೋದಿ ಅವರು ಮೈಸೂರಿಗೆ ಬರುತ್ತಿರುವುದು ಇಡೀ ಮೈಸೂರಿಗರಿಗೆ ಸಂತಸ ಹಾಗೂ ಹೆಮ್ಮೆಯ ತರುವ ವಿಚಾರ. ಮೋದಿ ಭೇಟಿಗೆ ನಮ್ಮ ಮೈಸೂರಿನ ಮಾಧ್ಯಮದ ಪಾತ್ರ ಬಹಳ ದೊಡ್ಡದು. ಇಷ್ಟು ವರ್ಷಗಳ ಕಾಲ ಯೋಗ ಸಂಬಂಧಿತ ಯಾವುದೇ ವಿಚಾರಗಳ ಬಗ್ಗೆ ಮಾಧ್ಯಮದಲ್ಲಾಗಲೀ ಅಥವಾ ಪತ್ರಿಕೆಯಲ್ಲಾಗಲೀ ನಕಾರಾತ್ಮಕ ವರದಿ ಬಂದೇ ಇಲ್ಲ. ಹೀಗಾಗಿ ಎಲ್ಲಾ ಮಾಧ್ಯಮದವರಿಗೂ ವೈಎಫ್‌ಎಮ್ ಧನ್ಯವಾದ ತಿಳಿಸುತ್ತದೆ ಎಂದರು.

ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರ ಬಳಿ ಮೈಸೂರಿನಲ್ಲಿ ಯೋಗ ವಿಶ್ವವಿದ್ಯಾಲಯ ತೆರೆದು, ಸಂಶೋಧನೆಗೂ, ತರಬೇತಿಗೂ ಅವಕಾಶ ಮಾಡಿಕೊಡಲು ಮನವಿ ಮಾಡುವ ಉದ್ದೇಶ ಹೊಂದಿದ್ದೇವೆಂದು ಶ್ರೀಹರಿ ಅವರು ತಿಳಿಸಿದರು.

ಯೋಗ ಫೆಡರೇಶನ್ ಆಫ್ ಮೈಸೂರಿನ ಪ್ರಧಾನ ಕಾರ್ಯದರ್ಶಿ ಡಾ. ಪಿ.ಎನ್. ಗಣೇಶ್ ಕುಮಾರ್ ಮಾತನಾಡಿ, ವಿಶ್ವ ಯೋಗ ದಿನದಲ್ಲಿ 45 ನಿಮಿಷಗಳ ಕಾಲ ಯೋಗ ಶಿಷ್ಟಾಚಾರ ಹೇಗಿರುತ್ತದೆ ಎಂಬುದನ್ನೂ ತಿಳಿಸಿದರು. ವಿಶ್ವ ಯೋಗ ದಿನದ ಹಿನ್ನೆಲೆ ಪ್ರತಿ ಭಾನುವಾರ ಯೋಗ ಅಭ್ಯಾಸ ನಡೆಯುತ್ತಿದ್ದು, ಮುಂದಿನ ಭಾನುವಾರ ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಮಠದಲ್ಲಿ ಹಾಗೂ ಜೂನ್ 5ರ ಭಾನುವಾರ ಸುತ್ತೂರು ಕ್ಷೇತ್ರದಲ್ಲಿ ನಡೆಯಲಿದೆ ಎಂದರು.

ಯೋಗ ಫೆಡರೇಶನ್ ಆಫ್ ಮೈಸೂರಿನ ಉಪಾಧ್ಯಕ್ಷರಾದ ಎನ್. ಎಸ್. ಸತ್ಯನಾರಾಯಣ, ಸಂಘಟನಾ ಕಾರ್ಯದರ್ಶಿ ಎಸ್. ಶಶಿಕುಮಾರ್, ಖಾಜಾಂಚಿ ಬಿ.ಪಿ. ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.