ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಬಾರದು ಮತ್ತು ವಿಚಾರಣೆಗಾಗಿ ಅವರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಲಾಗಿದೆ ಎಂಬ ಮಧ್ಯಂತರ ಆದೇಶವನ್ನು ಕರ್ನಾಟಕ ಹೈಕೋರ್ಟ್ ವಿಸ್ತರಿಸಿದೆ.
ಪ್ರಕರಣ ರದ್ದುಪಡಿಸುವಂತೆ ಕೋರಿ ಬಿ ಎಸ್ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಮೊದಲಿಗೆ ಪ್ರಕರಣವನ್ನು ಇಂದು ವಿಚಾರಣೆ ಪಟ್ಟಿ ಮಾಡಿರಲಿಲ್ಲ. ಈ ವಿಚಾರವನ್ನು ಸಿಐಡಿ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯ್ಕ್ ಅವರು ಪೀಠದ ಮುಂದೆ ಉಲ್ಲೇಖಿಸಿದರು. ಆಗ ಪೀಠವು ಮಧ್ಯಾಹ್ನ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಹೇಳಿತ್ತು.
ಅಂತೆಯೇ, ಮಧ್ಯಾಹ್ನ ಪ್ರಕರಣದ ವಿಚಾರಣೆ ತಡವಾಗಿದ್ದರಿಂದ ಕಲಾಪ ಅಂತ್ಯದಲ್ಲಿ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಪೋಕ್ಸೊ ಪ್ರಕರಣದ ಸಂತ್ರಸ್ತೆಯ ಸೋದರನ ಪರವಾಗಿ ಹಾಜರಾಗಿದ್ದ ವಕೀಲ ಎಸ್ ಬಾಲನ್ ಅವರು “ಸಿಐಡಿಯು ವಿಚಾರಣಾಧೀನ ನ್ಯಾಯಾಲಯಕ್ಕೆ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಯಡಿಯೂರಪ್ಪ ಅರ್ಜಿ ಅಮಾನ್ಯವಾಗುತ್ತದೆ” ಎಂದರು.
ಆಗ ಬಿಎಸ್‌ವೈ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಈಗಾಗಲೇ ಪ್ರಕರಣದಲ್ಲಿ ಮಧ್ಯಂತರ ಆದೇಶವಾಗಿದೆ. ಹೀಗಾಗಿ, ಅರ್ಜಿ ತಿದ್ದುಪಡಿ ಸಂಬಂಧ ಮೆಮೊ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ಪುರಸ್ಕರಿಸಿರುವುದರಿಂದ ಅರ್ಜಿ ತಿದ್ದುಪಡಿ ಮಾಡಿ ಸಲ್ಲಿಸಲಾಗಿದೆ” ಎಂದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಪೀಠವು ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿತು.