ಮನೆ ಅಪರಾಧ ಇಬ್ಬರು ನಕಲಿ ವೈದ್ಯರಿಗೆ 1 ಲಕ್ಷ ರೂ ದಂಡ, ಮೆಡಿಕಲ್ ಸ್ಟೋರ್ ಮುಚ್ಚಲು ದಾವಣಗೆರೆ ಡಿಸಿ...

ಇಬ್ಬರು ನಕಲಿ ವೈದ್ಯರಿಗೆ 1 ಲಕ್ಷ ರೂ ದಂಡ, ಮೆಡಿಕಲ್ ಸ್ಟೋರ್ ಮುಚ್ಚಲು ದಾವಣಗೆರೆ ಡಿಸಿ ಆದೇಶ

0

Join Our Whatsapp Group

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ನಕಲಿ ವೈದ್ಯ ಹಾಗೂ ಲಿಂಗಾಪುರದಲ್ಲಿ ಫಾರ್ಮಾಸಿಸ್ಟ್ ನಡೆಸುತ್ತಿದ್ದ ಕ್ಲಿನಿಕ್ ಮುಚ್ಚಿಸಲಾಗಿದೆ. ಇಬ್ಬರಿಗೂ ತಲಾ 1 ಲಕ್ಷ ರೂ. ದಂಡ ಪಾವತಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಭದ್ರಾವತಿ ಮೂಲದ ಶ್ರೀನಿವಾಸ್ (57) ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಮೆಡಿಕಲ್ಸ್ ಸ್ಟೋರ್ ಜೊತೆಗೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಾ ಜನರಿಗೆ ಚಿಕಿತ್ಸೆ ನೀಡುತ್ತಿದ್ದರು. ಇವರು ಪಡೆದ ಮೆಡಿಕಲ್ ಸ್ಟೋರ್ ಲೈಸೆನ್ಸ್ ರದ್ದುಪಡಿಸಿ ದಂಡ ವಿಧಿಸಲಾಗಿದೆ.

ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕಿನ ಮೂಲದ ಮತ್ತೋರ್ವ ನಕಲಿ ವೈದ್ಯ ಲಕ್ಷ್ಮಣ್ (45) ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಮನೆ ಬಾಡಿಗೆ ಪಡೆದು ಹಲವು ವರ್ಷಗಳಿಂದ ಅನಧಿಕೃತ ಕ್ಲಿನಿಕ್ ನಡೆಸುತ್ತಾ ಬಂದಿದ್ದರು. ಕ್ಲಿನಿಕ್ ತಪಾಸಣೆ ವೇಳೆ ಬಿಇಎಂಎಸ್ ಪ್ರಮಾಣ ಪತ್ರ ಹೊಂದಲಾಗಿದೆ ಎಂಬ ಮಾಹಿತಿ ನೀಡಿದ್ದರು. ಆದರೆ ಅಮಾನ್ಯ ಪ್ರಮಾಣ ಪತ್ರವಾಗಿರುವುದರಿಂದ ನಕಲಿ ಎಂದು ಪರಿಗಣಿಸಿ ಒಂದು ಲಕ್ಷ ರೂ ದಂಡದ ಬರೆ ಎಳೆಯಲಾಗಿದೆ.

ಉಪ ವಿಭಾಗಾಧಿಕಾರಿಯಿಂದ ಸ್ಥಳ ಮಹಜರ್: ನಕಲಿ ಕ್ಲಿನಿಕ್ಗಳ ಬಗ್ಗೆ ಹೊನ್ನಾಳಿ ಉಪ ವಿಭಾಗಾಧಿಕಾರಿ ಅಭಿಷೇಕ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಸ್ಥಳ ಮಹಜರು ಮಾಡಿ ಸಮಗ್ರ ವರದಿ ನೀಡಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಕೆಪಿಎಂಇ ನೋಂದಣಿ ಸದಸ್ಯ ಕಾರ್ಯದರ್ಶಿ ಡಾ.ಷಣ್ಮುಖಪ್ಪ ಜಿಲ್ಲಾಧಿಕಾರಿಗಳಿಗೆ ವರದಿಯೊಂದಿಗೆ ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು.