ಮನೆ ರಾಷ್ಟ್ರೀಯ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಎಫ್‌ಐಆರ್‌

ಮಹೇಂದ್ರ ಸಿಂಗ್ ಧೋನಿ ವಿರುದ್ಧ ಎಫ್‌ಐಆರ್‌

0

ನವದೆಹಲಿ (New Delhi)- ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಚೆಕ್‌ ಬೌನ್ಸ್ ಪ್ರಕರಣ ಸಂಬಂಧ ಈ ಎಫ್‌ ಐಆರ್‌ ದಾಖಲಾಗಿದೆ.

ನ್ಯೂ ಗ್ಲೋಬಲ್‌ ಇಂಡಿಯಾ ಲಿಮಿಟೆಡ್‌ನ ಚೆಕ್‌ ಬೌನ್ಸ್‌ ಸಂಬಂಧ ಧೋನಿ ಸೇರಿದಂತೆ ಒಟ್ಟು ಎಂಟು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್ ನಿಂದ ಪಡೆದ 30 ಲಕ್ಷ ರೂಪಾಯಿ ಮೌಲ್ಯದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿರುವ ಎಸ್‌ಕೆ ಎಂಟರ್‌ಪ್ರೈಸಸ್ ಹೆಸರಿನ ಕಂಪನಿಯು ಬೇಗುಸರಾಯ್‌ನ ಸಿಜೆಎಂ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸಿದೆ. ಅಂದಹಾಗೆ ಧೋನಿ ಈ ಉತ್ಪನ್ನವನ್ನು ಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ಇಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.

ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪ್ರಕರಣವನ್ನು ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಜಯ್ ಕುಮಾರ್ ಮಿಶ್ರಾ ಅವರಿಗೆ ಕಳುಹಿಸಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆ ಜೂನ್ 28 ರಂದು ನಡೆಯಲಿದೆ.

ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್‌ನಿಂದ 30 ಲಕ್ಷ ರೂ. ಮೌಲ್ಯದ ರಸಗೊಬ್ಬರದ ಆದೇಶವನ್ನು ಎಸ್‌ಕೆ ಎಂಟರ್‌ಪ್ರೈಸ್ ಸ್ವೀಕರಿಸಿತ್ತು. ಅದರಂತೆ ಎಸ್‌ಕೆ ಎಂಟರ್‌ಪ್ರೈಸಸ್‌ ರಸಗೊಬ್ಬರನ್ನು ನೀಡಿತ್ತು. ಆದರೆ, ಡೀಲರ್‌ ಈ ಹಿಂದಿನ ಒಪ್ಪಂದಕ್ಕೆ ಬದ್ದವಾಗಿರದ ಕಾರಣ ಸಾಕಷ್ಟು ಉತ್ಪನ್ನಗಳು ಮಾರಾಟವಾಗದೆ ಹಾಗೆಯೇ ಉಳಿದಿದ್ದವು. ನಂತರ ಕಂಪನಿ ಅವುಗಳನ್ನು ಹಿಂದಕ್ಕೆ ಪಡೆದು, ಏಜೆನ್ಸಿ ಮೂಲಕ 30 ಲಕ್ಷ ರೂ. ಚೆಕ್‌ ಅನ್ನು ನೀಡಿತ್ತು. ಆದರೆ, ಚೆಕ್‌ ಅನ್ನು ಬ್ಯಾಂಕ್‌ಗೆ ಹಾಕಿದ ಬಳಿಕ ಬೌನ್ಸ್‌ ಆಗಿರುವುದು ತಿಳಿದು ಬಂದಿದೆ ಎಂದು ವರದಿಯಾಗಿದೆ.

ತದ ನಂತರ, ನ್ಯೂ ಗ್ಲೋಬಲ್‌ ಇಂಡಿಯಾ ಲಿಮಿಟೆಡ್‌ ಕಂಪನಿಗೆ ಲೀಗಲ್ ನೋಟಿಸ್ ನೀಡಲಾಯಿತು. ಆದರೆ, ಈ ಕಂಪನಿಯಿಂದ ಏಜೆನ್ಸಿಯು ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಕೆ ಎಂಟರ್‌ಪ್ರೈಸಸ್‌ನ ಮಾಲೀಕ ನೀರಜ್ ಕುಮಾರ್ ನಿರಾಲಾ ಅವರು ಸಂಬಂಧಿಸಿದ ಉತ್ಪನ್ನವನ್ನು ಪ್ರಚಾರ ಮಾಡಿದ ಎಂಎಸ್ ಧೋನಿ ಮತ್ತು ಇತರ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.