ಚಿಕ್ಕಮಗಳೂರು : ಕಾಫಿನಾಡಿನ ಸೌಂದರ್ಯ ಸವಿಯುವ ಪ್ರವಾಸಿಗರಿಗಾಗಿ ಹೊಸ ವರ್ಷ – ಕ್ರಿಸ್ಮಸ್ ಸಮಯದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಹೆಲಿಟೂರಿಸಂ ಆರಂಭಿಸಿದೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯನವನ್ನು ಪ್ರಮೋಟ್ ಮಾಡಲು ಸರ್ಕಾರ ಮುಂದಾಗಿದೆ.
ಕಾಫಿನಾಡ ಪ್ರವಾಸೋದ್ಯಮವನ್ನು “ಒಂದು ಜಿಲ್ಲೆ ಹಲವು ರಾಜ್ಯ” ಅಂತಿದ್ದ, ಸರ್ಕಾರ ಈಗ ಪ್ರಮೋಟ್ ಮಾಡುವ ಮನಸ್ಸು ಮಾಡಿದೆ. ಸಿಎಂ-ಡಿಸಿಎಂ-ಮಿನಿಸ್ಟರ್ ಬಂದಾಗ ಇಲ್ಲಿ ಹೆಲಿಕಾಪ್ಟರ್ ಸದ್ದು ಕೇಳ್ತಿತ್ತು. ಆದ್ರೀಗ, 18 ದಿನಗಳ ಕಾಲ ನಿತ್ಯ ಕಾಫಿನಾಡ ಕಾಡುಗಳಲ್ಲಿ ಹೆಲಿಕಾಪ್ಟರ್ ಸದ್ದು ಮಾಡಲಿದೆ.
ಮುಳ್ಳಯ್ಯನಗಿರಿ, ದತ್ತಪೀಠ, ಮೇರುತಿ ಗುಡ್ಡ, ದೇವರಮನೆ ಗುಡ್ಡ, ಎತ್ತಿನಭುಜ, ರಾಣಿ ಝರಿ. ಮುಗಿಲೆತ್ತರದ ಬೆಟ್ಟ-ಗುಡ್ಡಗಳು. ಕಣ್ಣಿನ ದೃಷ್ಟಿ ಮುಗಿದರೂ ಮುಗಿಯದ ದಟ್ಟ ಕಾನನ. ಭೂಮಿಗೆ ಹಾಸಿದಂತೆ ಕಾಣುವ ಕಾಫಿ ತೋಟಗಳು. ಒಂದೋ-ಎರಡೋ… ಇಷ್ಟು ದಿನ ಕಾಫಿನಾಡ ಸೌಂದರ್ಯವನ್ನ ಕಾರು-ಬೈಕಿನಲ್ಲಿ ಸವಿದಿದ್ದವರಿಗೆ ಇದೀಗ ಹೆಲಿಕಾಪ್ಟರ್‌ನಲ್ಲಿ ಸವಿಯುವ ಸವರ್ಣಾವಕಾಶ ಲಭ್ಯವಾಗಿದೆ.
ತುಂಬಿ ಎವೀಯೇಶನ್ ಸಹಭಾಗಿತ್ವದಲ್ಲಿ ಕಾಫಿನಾಡ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ 18 ದಿನಗಳ ಕಾಲ ಪ್ರವಾಸ ಪ್ರಿಯರಿಗೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಕಲ್ಪಿಸಿದೆ. ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ, ಮೂಡಿಗೆರೆ ತಾಲೂಕಿನ ದೇವರ ಮನೆ ಗುಡ್ಡ, ಎತ್ತಿನ ಭುಜ, ಕಳಸ ತಾಲೂಕಿನ ಮೇರುತಿ ಹಾಗೂ ರಾಣಿ ಝರಿ ಜಲಪಾತದ ಮನಮೋಹಕ ದೃಶ್ಯವನ್ನು ಹೆಲಿಕ್ಯಾಪ್ಟರ್‌ನಲ್ಲಿ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿದೆ.














