ಮನೆ ಆರೋಗ್ಯ ಓಮಿಕ್ರಾನ್ ನ ಹೊಸ ಉಪತಳಿ ಬಿಎ.2.75 ತಳಿ ಭಾರತದಲ್ಲಿ ಪತ್ತೆ

ಓಮಿಕ್ರಾನ್ ನ ಹೊಸ ಉಪತಳಿ ಬಿಎ.2.75 ತಳಿ ಭಾರತದಲ್ಲಿ ಪತ್ತೆ

0

ವಾಷಿಂಗ್ಟನ್‌(Washington): ಕೊರೊನಾ ವೈರಸ್‌ನ ರೂಪಾಂತರಿ ಓಮೈಕ್ರಾನ್‌ನ ಹೊಸ ಉಪತಳಿ ಬಿಎ.2.75 ಭಾರತದಲ್ಲಿ ಪತ್ತೆಯಾಗಿದ್ದು ನಿಗಾ ವಹಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೋಸ್‌ ಅಡಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ ಎರಡು ವಾರಗಳಲ್ಲಿ ಜಾಗತಿಕವಾಗಿ ಶೇ. 30ರಷ್ಟು ಕೋವಿಡ್‌ ಪ್ರಕರಣಗಳು ಹೆಚ್ಚಾಗಿವೆ. ಡಬ್ಲ್ಯುಎಚ್‌ಒ 6 ಉಪ-ವಲಯಗಳ ಪೈಕಿ ನಾಲ್ಕರಲ್ಲಿ ಕಳೆದ ವಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಯುರೋಪ್ ಮತ್ತು ಅಮೆರಿಕಾದಲ್ಲಿ, ಬಿಎ.4 ಮತ್ತು ಬಿಎ.5ನಿಂದಾಗಿ ಹೊಸ ಅಲೆ ಕಾಣಿಸಿಕೊಂಡಿದೆ. ಭಾರತದಲ್ಲಿ ಬಿಎ.2.75 ರ ಹೊಸ ತಳಿಯನ್ನು ಪತ್ತೆಹಚ್ಚಲಾಗಿದೆ. ಅದರ ಮೇಲೆ ನಾವು ನಿಗಾವಹಿಸಿದ್ದೇವೆ ಎಂದು ಹೇಳಿದರು.

ಬಿಎ.2.75 ಕುರಿತು ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಟ್ವಿಟರ್‌ನಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ. ಬಿಎ.2.75 ಎಂದು ಕರೆಯಲಾಗುವ ತಳಿಯೊಂದು ಹೊರಹೊಮ್ಮಿದೆ. ಅದು ಭಾರತದಲ್ಲಿ ಮೊದಲು ಪತ್ತೆಯಾಗಿದ್ದು, ನಂತರ 10 ದೇಶಗಳಲ್ಲಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.