ಮನೆ ರಾಷ್ಟ್ರೀಯ ಸ್ಕೂಟಿಯಲ್ಲಿ ಬಂದು ಆನೆಗೆ ಡಿಕ್ಕಿ ಹೊಡೆದ ಮಹಿಳೆ! ಡಿಕ್ಕಿ ಜೋರಿಗೆ ಆನೆಯ ದಂತವೇ ಕಟ್..!

ಸ್ಕೂಟಿಯಲ್ಲಿ ಬಂದು ಆನೆಗೆ ಡಿಕ್ಕಿ ಹೊಡೆದ ಮಹಿಳೆ! ಡಿಕ್ಕಿ ಜೋರಿಗೆ ಆನೆಯ ದಂತವೇ ಕಟ್..!

0

ಉತ್ತರಾಖಂಡ್‌ : ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ನೂರಾರು ಅಪಘಾತಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಉತ್ತರಾಖಂಡ್‌ನಲ್ಲಿ ನಡೆದಿರುವ ಈ ಅಪಘಾತ ಮಾತ್ರ ನೆಟ್ಟಿಗರನ್ನು ಅಕ್ಷರಶಃ ಆಶ್ಚರ್ಯಚಕಿತರನ್ನಾಗಿಸಿದೆ. ಸಾಮಾನ್ಯವಾಗಿ ರಸ್ತೆಯಲ್ಲಿ ಆನೆ ಬಂದರೆ ಮನುಷ್ಯರು ಹೆದರಿ ಓಡುತ್ತಾರೆ ಅಥವಾ ವಾಹನಗಳನ್ನು ದೂರದಲ್ಲೇ ನಿಲ್ಲಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳಾ ಶಿಕ್ಷಕಿ ತನ್ನ ಸ್ಕೂಟಿಯನ್ನು ತಂದು ನೇರವಾಗಿ ಕಾಡಾನೆಗೇ ಡಿಕ್ಕಿ ಹೊಡೆದಿದ್ದಾರೆ. ಈ ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಕಾಡಿನ ಅತ್ಯಂತ ಬಲಿಷ್ಠ ಪ್ರಾಣಿ ಆನೆಯ ದಂತವೇ ಮುರಿದು ರಸ್ತೆಗೆ ಬಿದ್ದಿದೆ.

ಉತ್ತರಾಖಂಡ್‌ನ ಖತಿಮಾ ರಸ್ತೆಯ ಚಾಕರ್‌ಪುರ ಅರಣ್ಯ ಪ್ರದೇಶದ ಬಳಿ ಈ ವಿಚಿತ್ರ ಅಪಘಾತ ಸಂಭವಿಸಿದೆ. ವರದಿಗಳ ಪ್ರಕಾರ, ಸ್ಕೂಟರ್ರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಶಿಕ್ಷಕಿಯೊಬ್ಬರು ಆನೆ ಕಾರಿಡಾರ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ರಸ್ತೆಗೆ ಬಂದ ಆನೆಯನ್ನು ಗಮನಿಸದ ಅವರು, ತಮ್ಮ ಆಕ್ಟಿವಾ ಸ್ಕೂಟಿಯನ್ನು ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ರಭಸಕ್ಕೆ ಆನೆ ಕೂಡ ಒಂದು ಕ್ಷಣ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದಿದೆ. ಅಷ್ಟೇ ಅಲ್ಲದೆ, ಆನೆಯ ದಂತ ಮುರಿದು ರಸ್ತೆಯಲ್ಲೇ ಬಿದ್ದಿದೆ. ಇನ್ನು ಸ್ಕೂಟಿಯಲ್ಲಿದ್ದ ಮಹಿಳೆಗೂ ತೀವ್ರ ಗಾಯಗಳಾಗಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗಾಯಗೊಂಡ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅತ್ತ ಅಪಘಾತದಿಂದ ಕಂಗಾಲಾದ ಆನೆ, ಹೆದರಿ ತಕ್ಷಣವೇ ಕಾಡಿನತ್ತ ಓಡಿ ಮರೆಯಾಗಿದೆ.

ಈ ಅಪಘಾತದ ದೃಶ್ಯಗಳು ಮತ್ತು ಮುರಿದು ಬಿದ್ದ ಆನೆಯ ದಂತದ ಫೋಟೋಗಳು ಸದ್ಯ ಎಕ್ಸ್ (ಟ್ವಿಟರ್) ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ. ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. “ಇವರಿಗೆ ಅಷ್ಟೊಂದು ದೊಡ್ಡ ಆನೆ ರಸ್ತೆಯಲ್ಲಿದ್ದರೂ ಕಾಣಿಸಲಿಲ್ಲವೇ?”, “ಈಕೆಯ ಸ್ಕೂಟಿ ಬುಲ್ಡೋಜರ್‌ಗಿಂತಲೂ ಬಲಿಷ್ಠವಾಗಿದೆ ಅನಿಸುತ್ತದೆ”, “ಪಾಪ ಆನೆಗೆ ಏನೋ ಆಪತ್ತು ಬಂತು” ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ​ಅರಣ್ಯ ಪ್ರದೇಶಗಳಲ್ಲಿ ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.