ಬೆಂಗಳೂರು ಡೇಟಿಂಗ್ ಆ್ಯಪ್ವೊಂದರಲ್ಲಿ ಪರಿಚಯವಾಗಿದ್ದ ಯುವಕನನ್ನು ಭೇಟಿಯಾಗಲು ಕರೆಸಿಕೊಂಡ ಮತ್ತೋರ್ವ ಯುವಕ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದು ಹಣ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಬಹುದು.
27 ವರ್ಷದ ಸಿವಿಲ್ ಇಂಜಿನಿಯರ್ ಯುವಕನೋರ್ವ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. 3 ವರ್ಷಗಳಿಂದ ಡೇಟಿಂಗ್ ಆ್ಯಪ್ ಬಳಸುತ್ತಿದ್ದ ದೂರುದಾರರಿಗೆ ಆರೋಪಿ ಯುವಕ ಪರಿಚಯವಾಗಿದ್ದ. ಇವರ ಸ್ನೇಹದ ಬಳಿಕ ಇಬ್ಬರೂ ಪರಸ್ಪರ ನಂಬರ್ ವಿನಿಮಯ ಮಾಡಿಕೊಂಡಿದ್ದರು. ನಂತರ ಮೇ 1ರಂದು ದೂರುದಾರರಿಗೆ ಭೇಟಿ ಮಾಡುವಂತೆ ಯಲಹಂಕ ವ್ಯಾಪ್ತಿಯ ಪಾಲನಹಳ್ಳಿ ಗೇಟ್ ಬಳಿ ಬರುವಂತೆ ಆರೋಪಿಗಳು ತಿಳಿಸಿದ್ದರು. ಅದರಂತೆ ದೂರುದಾರ ಯುವಕ ಭೇಟಿಗೆ ತೆರಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು ಎನ್ನಲಾಗಿದೆ.
ನಂತರ ಈತನನ್ನು ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು ಅವಾಚ್ಯವಾಗಿ ನಿಂದಿಸಿ, ಬೆದರಿಸಿದ್ದರು. ಬಳಿಕ ಮೊಬೈಲ್ ಕಿತ್ತುಕೊಂಡು ಪಾಸ್ ವರ್ಡ್ ಹೇಳುವಂತೆ ಒತ್ತಾಯಿಸಿದ್ದರು. ಹೇಳದಿದ್ದಾಗ ದೂರುದಾರರ ತೊಡೆಗೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದಿದ್ದ ಆರೋಪಿಗಳು ಬಲವಂತವಾಗಿ 16 ಸಾವಿರ ರೂಪಾಯಿ ವರ್ಗಾವಣೆ ಮಾಡಿಸಿಕೊಂಡಿದ್ದರು. ಬಳಿಕ ದೂರುದಾರರನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದದ್ದರು. ನಂತರ ಸಂತ್ರಸ್ತ ದೂರದಾರ ತನ್ನ ಇನ್ನೋರ್ವ ಸ್ನೇಹಿತನಿಗೆ ಕರೆ ಮಾಡಿದ್ದು, ಆತನ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ವಿವರಿಸಿದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಠಾಣೆ ಪೊಲೀಸರು ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳು ಈ ಹಿಂದೆಯೂ ಸಹ ಇದೇ ಆ್ಯಪ್ ಮೂಲಕ 8ಕ್ಕೂ ಹೆಚ್ಚು ಜನರಿಗೆ ಸುಲಿಗೆ ಮಾಡಿರುವ ಮಾಹಿತಿ ಲಭ್ಯವಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ತಿಳಿಸಿದ್ದಾರೆ ಎನ್ನಲಾಗಿದೆ.















