ಮನೆ ಸುದ್ದಿ ಜಾಲ ಡಾ.ರಾಜ್‌ಕುಮಾರ್ ಸಮಾಧಿ ಬಗ್ಗೆ ವಿವಾದ; ನಟ ಚೇತನ್ ವಿರುದ್ಧ ಎಫ್‌ಐಆರ್‌

ಡಾ.ರಾಜ್‌ಕುಮಾರ್ ಸಮಾಧಿ ಬಗ್ಗೆ ವಿವಾದ; ನಟ ಚೇತನ್ ವಿರುದ್ಧ ಎಫ್‌ಐಆರ್‌

0

ಬೆಂಗಳೂರು : ಡಾ.ರಾಜ್‌ಕುಮಾರ್ ಸಮಾಧಿ ಬಗ್ಗೆ ಶುರುವಾಗಿದ್ದ ವಿವಾದ ಸಂಬಂಧ ಇದೀಗ ನಟ ಚೇತನ್‌ ಅಹಿಂಸಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ನಟ ಚೇತನ್‌ ಶೇಷಾದ್ರಿಪುರಂ ಪೊಲೀಸ್‌ ಠಾಣೆಯಲ್ಲಿ ಹಿರಿಯ ನಿರ್ಮಾಪಕ ಸಾರಾ ಗೋವಿಂದು ವಿರುದ್ಧ ದೂರು ನೀಡಿದ್ದರು. ದೂರಿನನ್ವಯ ಎಫ್‌ಐಆರ್‌ ಕೂಡ ದಾಖಲಾಗಿತ್ತು.

ಇದೀಗ ಸಾರಾ ಗೋವಿಂದು ಅವರು ಕೂಡ ನಟ ಚೇತನ್‌ ವಿರುದ್ಧ ದಾಖಲಿಸಿದ್ದು, ದೂರಿನನ್ವಯ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಇಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವಿಡಿಯೋ ಸಂಗ್ರಹಿಸಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಸಾಕ್ಷಿ ಕಲೆ ಹಾಕಿದ ನಂತರ ನೋಟಿಸ್ ನೀಡಲು ಪೊಲೀಸರು ಚಿಂತಿಸಿದ್ದು, ಬಳಿಕ ಹೇಳಿಕೆ ದಾಖಲು ಮಾಡಿಕೊಳ್ಳಲಿದ್ದಾರೆ.

ಏ.24ರಂದು ಡಾ.ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ರಾತ್ರಿ ನಟ ಚೇತನ್ ಅಹಿಂಸಾ ರಾಜ್‌ಕುಮಾರ್ ಸಮಾಧಿ ಬಗ್ಗೆ ಪೋಸ್ಟ್ ಹಾಕಿದ್ದರು. ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿನಾ? ಅಂತ ಪ್ರಶ್ನೆ ಮಾಡಿದ್ದರು. 21ನೇ ಶತಮಾನದಲ್ಲಿ ಪ್ರಮುಖ ಹೋರಾಟವೇ ಭೂಮಿಯಾಗಿದೆ. ಸರ್ಕಾರ ಅದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಉಪಯೋಗಕ್ಕೆ ಹಂಚಬೇಕು. ಮತಗಳ ಲಾಭದ ಉದ್ದೇಶದಿಂದ ಹಂಚಬಾರದು ಎಂದು ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ರಾಜ್ ಅಭಿಮಾನಿಗಳು ಚೇತನ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಚೇತನ್ ಪೋಸ್ಟ್‌ನಿಂದ ಡಾ.ರಾಜ್ ಅಭಿಮಾನಿಗಳು ರೊಚ್ಚಿಗೆದ್ದು, ನಿರ್ಮಾಪಕ ಸಾರಾ ಗೋವಿಂದು, ಫಿಲ್ಮ್ ಚೇಂಬರ್ ಅಧ್ಯಕ್ಷೆ-ನಟಿ ಜಯಮಾಲ, ಹಿರಿಯ ನಟ ಸುಂದರ್ ರಾಜ್ ಅವರು ಚೇತನ್ ವಿರುದ್ಧ ಕೆಂಡಕಾರಿದ್ದರು. ಇನ್ನು, ಡಾ.ರಾಜ್‌ಕುಮಾರ್ ಸೇನೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಅಲ್ಲದೇ ನಿರ್ಮಾಪಕ ಸಾರಾ ಗೋವಿಂದು ಸೇರಿದಂತೆ ಹಲವಾರು ಅಭಿಮಾನಿಗಳು ಚೇತನ್ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು. ಇದರ ಬೆನ್ನಲ್ಲೇ ನಟ ಚೇತನ್ ಕೂಡ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದರು. ನನ್ನ ಹೇಳಿಕೆಯಿಂದ ಯಾರದಾದ್ರೂ ಮನಸ್ಸಿಗೆ ನೋವು ಆಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಕ್ಷಮೆನೂ ಕೇಳುತ್ತೇನೆ, ಯಾರಿಗೂ ನೋವು ಮಾಡುವ ಉದ್ದೇಶ ನನಗಿರಲಿಲ್ಲ. ನಾನು ಸಹ ರಾಜ್ ಕುಮಾರ್ ಅಭಿಮಾನಿ ಎಂದಿದ್ದರು.