ಹಾವೇರಿ(Haveri): ಅಶಿಸ್ತು ಮತ್ತು ಕರ್ತವ್ಯ ಲೋಪ ಆರೋಪ ಹಿನ್ನೆಲೆ ಹಾನಗಲ್ ಪೊಲೀಸ್ ಠಾಣಾ ಪಿಎಸ್’ಐ ಶ್ರೀಶೈಲ ಪಟ್ಟಣಶೆಟ್ಟಿ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಜಿಲ್ಲಾ ಎಸ್’ಪಿ ಹನುಮಂತರಾಯ ಆದೇಶ ಹೊರಡಿಸಿದ್ದಾರೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಿಸಲು ಪೊಲೀಸ್ ಠಾಣೆಗೆ ತೆರಳಿದ್ದ ವಕೀಲರ ಮೇಲೆ ಹಲ್ಲೆ ಮಾಡಿದ ಆರೋಪ ಶ್ರೀಶೈಲ ಅವರ ಮೇಲಿದೆ.
ಅಲ್ಲದೇ ಅವ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಪ್ರಕರಣದ ವಿವರ:
ಡಿಸೆಂಬರ್ 27 ರಂದು ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದ ಮಂಜುನಾಥ ಬಾರ್ಕಿ ಎಂಬುವರ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಿಸಿದಂತೆ ನ್ಯಾಯವಾದಿ ಶಿವಕುಮಾರ ತಳವಾರ ಎಂಬುವರು ಪ್ರಕರಣದ ಕುರಿತು ವಿಚಾರಿಸಲು ಹಾನಗಲ್ ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಪಿಎಸ್’ಐ ಶ್ರೀಶೈಲ ಅವರು ಶಿವಕುಮಾರ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಸಾರ್ವಜನಿಕರ ಎದುರಿಗೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಅಲ್ಲದೇ ಕೊರಳಪಟ್ಟಿ ಹಿಡಿದು ಜಾತಿ ನಿಂದನೆ ಮಾಡಿದ್ದು, ಹಲ್ಲೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ್ದರು.
ಈ ಸಂಬಂಧ ನ್ಯಾಯವಾದಿ ಶಿವಕುಮಾರ ಅವರು ಶ್ರೀಶೈಲ ವಿರುದ್ಧ ಕಲಂ 323, 504, 506, ಸಹಕಲಂ 34 ಐಪಿಸಿ ಮತ್ತು ಜಾತಿನಿಂದನೆ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಪೊಲೀಸ್ ಠಾಣೆ ಎದುರಿಗೆ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಪಿಎಸ್’ಐ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.