ಮನೆ ರಾಜ್ಯ ಲಾರಿ-ಕಾರಿನ ನಡುವೆ ಅಪಘಾತ: ಮೂವರ ಸಾವು; ಒಬ್ಬರ ಸ್ಥಿತಿ ಗಂಭೀರ

ಲಾರಿ-ಕಾರಿನ ನಡುವೆ ಅಪಘಾತ: ಮೂವರ ಸಾವು; ಒಬ್ಬರ ಸ್ಥಿತಿ ಗಂಭೀರ

0

ಮಂಡ್ಯ (Mandya): ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಾಗಮಂಗಲ ಹೊರವಲಯ ಎಂ.ಹೊಸೂರು ಗೇಟ್ ಬಳಿ ನಡೆದಿದೆ.

ಶನಿವಾರ ರಾತ್ರಿ ನಾಗಮಂಗಲ ಹೊರವಲಯ ಎಂ.ಹೊಸೂರು ಗೇಟ್ ಬಳಿ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.

ನಾಗಮಂಗಲ ತಾಲ್ಲೂಕು ಬೀರೇಶ್ವರಪುರದ ದೇವರಾಜು (42), ಪಾಂಡವಪುರ ತಾಲ್ಲೂಕಿನ ವದೇಸಮುದ್ರ ಗ್ರಾಮದ ನಿವಾಸಿ, ಕನಗನಮರಡಿ ವೃತ್ತದ ಗ್ರಾಮ ಸಹಾಯಕ ಮಂಜುನಾಥ್ (55), ಕೆನ್ನಾಳು ಗ್ರಾಮದ ರೈತ ಮಂಜುನಾಥ್ (64) ಮೃತಪಟ್ಟಿದ್ದಾರೆ.

ಪಾಂಡವಪುರ ತಾಲ್ಲೂಕಿನ ಎಲೆಕೆರೆ ಗ್ರಾಮದ ನಿವಾಸಿ ದಾಮರಹಳ್ಳಿ ವೃತ್ತದ ಗ್ರಾಮ ಸಹಾಯಕ ಸ್ವಾಮಿ (50) ತೀವ್ರವಾಗಿ ಗಾಯಗೊಂಡಿದ್ದು, ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವರಾಜು ಪಾಂಡವಪುರದಲ್ಲಿ ಗ್ರಾಮ ಲೆಕ್ಕಿಗನಾಗಿ‌ ಕಾರ್ಯ ನಿರ್ವಹಿಸುತ್ತಿದ್ದು, ಶನಿವಾರ ಕಚೇರಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸಹಾಯಕರೊಂದಿಗೆ ಸ್ವಗ್ರಾಮದ ಜಮೀನಿನ ಕೆಲಸದ ಉದ್ದೇಶದಿಂದ ಗ್ರಾಮಕ್ಕೆ ಬಂದಿದ್ದರು. ಸಂಜೆ ಕೆಲಸ ಮುಗಿಸಿ ಸ್ಯಾಂಟ್ರೊ ಕಾರಿನಲ್ಲಿ ನಾಗಮಂಗಲ ಕಡೆಯಿಂದ ಪಾಂಡವಪುರದ ಕಡೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಮೃತ ದೇಹಗಳನ್ನು ತಾಲ್ಲೂಕು‌ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ನಾಗಮಂಗಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಪ್ರಧಾನಿ ಮೋದಿ ಜರ್ಮನಿ, ಯುಎಇ ಪ್ರವಾಸ ಇಂದಿನಿಂದ
ಮುಂದಿನ ಲೇಖನಬೆಳಗಾವಿಯಲ್ಲಿ ಭೀಕರ ಅಪಘಾತ: 7 ಮಂದಿ ದುರ್ಮರಣ