ಎರಡನೇ ಪತಿ ಜೊತೆಗೂಡಿ ಮೊದಲ ಪತಿ ಕೊಲ್ಲಲು ಸಂಚು ನಡೆಸಿದ ಆರೋಪದಿಂದ ಮಹಿಳೆಯೊಬ್ಬರನ್ನು ಮುಕ್ತಗೊಳಿಸಿದ ಹಾಗೂ ದ್ವಿಪತಿತ್ವ ಆರೋಪದಿಂದ ಖುಲಾಸೆಗೊಳಿಸಿದ ಆದೇಶ ಮಾಡಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಬದಿಗೆ ಸರಿಸಿದೆ.
ಆರೋಪಿಯಾಗಿರುವ ಮಮತಾ ಅವರ ಮಾವ ಕೆ ಸಿ ರಾಮು ಅಲಿಯಾಸ್ ರಾಮಣ್ಣ ಅವರು ಸಲ್ಲಿಸಿದ್ದ ಕ್ರಿಮಿನಲ್ ತೀರ್ಪು ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಎಚ್ ಬಿ ಪ್ರಭಾಕರ ಶಾಸ್ತ್ರಿ ಅವರ ನೇತೃತ್ವದ ಏಕಸದಸ್ಯ ಪೀಠವು ಮೇಲಿನ ಆದೇಶ ಮಾಡಿದೆ.
“ಅಪರಾಧ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಆರ್ ಮಮತಾ ಅವರ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿಸಲು ಸಾಕಷ್ಟು ದಾಖಲೆಗಳು ಇವೆ. ಸಿಆರ್‌ಪಿಸಿ ಸೆಕ್ಷನ್ 227ರ ಅಡಿ ಮಮತಾ ಅವರು ಸಲ್ಲಿಸಿದ್ದ ಮನವಿಗೆ ಸಮ್ಮತಿಸಿ, ಆಕೆಯನ್ನು ಆರೋಪಗಳಿಂದ ಮುಕ್ತಗೊಳಿಸುವ ಮೂಲಕ ಸೆಷನ್ಸ್ ನ್ಯಾಯಾಧೀಶರು ಪ್ರಮಾದ ಎಸಗಿದ್ದಾರೆ. ಹೀಗಾಗಿ, ಆಕ್ಷೇಪಿತ ಆದೇಶವನ್ನು ಬದಿಗೆ ಸರಿಸಿ, ಆಕೆ ಸಿಆರ್‌ಪಿಸಿ ಸೆಕ್ಷನ್ 227ರ ಅಡಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಲು ಅರ್ಹವಾಗಿದೆ” ಎಂದರು.
ಪ್ರಕರಣದ ಹಿನ್ನೆಲೆ: ಮೊದಲ ಪತಿ ಕೆ ಆರ್ ಮಂಜುನಾಥ್ ಕಾಣೆಯಾಗಿದ್ದಾಗ ಆರೋಪಿ ಮಮತಾ ಅವರು ಮಂಜುನಾಥ್ ವೈ ಡಿ ಎಂಬಾತನನ್ನು ವಿವಾಹವಾಗಿದ್ದರು ಎನ್ನಲಾಗಿದೆ. ಸುಮಾರು ಒಂದೂವರೆ ವರ್ಷದ ಬಳಿಕ ಮೊದಲ ಪತಿ ವಾಪಸಾಗಿದ್ದು, ಪುತ್ರಿಯನ್ನು ತನ್ನ ಜೊತೆ ಕಳುಹಿಸಿಕೊಡುವಂತೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಸಂಚು ರೂಪಿಸಿ ಮಮತಾ ಮತ್ತು ಮಂಜುನಾಥ್ ಅವರು ಮೊದಲ ಪತಿಯ ಸಾವಿಗೆ ಕಾರಣರಾಗಿದ್ದರು ಎಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿ ಮಮತಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 302 (ಕೊಲೆ), 493, 494, 496 (ದ್ವಿಪತಿತ್ವ), 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 201 (ಸಾಕ್ಷ್ಯನಾಶ) ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಿ, ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸಲಾಗಿಲ್ಲ. ದ್ವಿಪತಿತ್ವ (ಸಂಜ್ಞೇತರ) ಅಪರಾಧವನ್ನು ಪೊಲೀಸರು ತನಿಖೆ ನಡೆಸಲಾಗದು ಹಾಗೂ ಕ್ರಿಮಿನಲ್ ಪಿತೂರಿ ಸಾಬೀತುಪಡಿಸಲು ಸೂಕ್ತ ದಾಖಲೆಗಳು ಇಲ್ಲ. ಹೀಗಾಗಿ, ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸಬೇಕು ಎಂದು ಆರೋಪಿ ಮಮತಾ ಸಲ್ಲಿಸಿದ್ದ ಅರ್ಜಿಯನ್ನು 2017ರಲ್ಲಿ ಮಂಡ್ಯದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಾನ್ಯ ಮಾಡಿತ್ತು. ಈಗ ಅದನ್ನು ಹೈಕೋರ್ಟ್ ಬದಿಗೆ ಸರಿಸಿದೆ.