ಮನೆ ಮನರಂಜನೆ ‘ಸಹರಾ’: ಕ್ರಿಕೆಟ್ ಸಾಧಕಿಯ ಕುರಿತ ಕನ್ನಡ ಚಿತ್ರ

‘ಸಹರಾ’: ಕ್ರಿಕೆಟ್ ಸಾಧಕಿಯ ಕುರಿತ ಕನ್ನಡ ಚಿತ್ರ

0

ಕ್ರಿಕೆಟ್‌ ಆಟಕ್ಕೆ ಸಂಬಂಧಪಟ್ಟಂತೆ ಹಲವಾರು ಚಲನಚಿತ್ರಗಳು, ಹಲವಾರು ಭಾಷೆಗಳಲ್ಲಿ ಈಗಾಗಲೇ ತೆರೆಮೇಲೆ ಬಂದುಹೋಗಿವೆ. ಆದರೆ ಓರ್ವ ಕ್ರಿಕೆಟ್‌ ಆಟಗಾರ್ತಿಯ ಸಾಧನೆಯ ಕುರಿತಂತೆ ಕಥೆ ಇಟ್ಟುಕೊಂಡು ಯಾವುದೇ ಚಿತ್ರ ನಿರ್ಮಾಣವಾಗಿಲ್ಲ. “ಸಹರಾ’ ಎನ್ನುವ ಚಿತ್ರದ ಮೂಲಕ ಯುವಕರ ತಂಡವೊಂದು ಅಂಥ ಪ್ರಯತ್ನವನ್ನು ಸಾಧಿಸಹೊರಟಿದೆ. ಕನ್ನಡದಲ್ಲಿ ಮೊದಲ ಮಹಿಳಾ ಕ್ರಿಕೆಟ್‌ ಪ್ರಧಾನ ಸಿನಿಮಾವೊಂದು ತಯಾರಾಗುತ್ತಿದೆ.

ಈ ಸಿನಿಮಾದ ನಾಯಕಿ ಸಾರಿಕಾ ಅವರಿಗೆ ಕ್ರಿಕೆಟ್ ಕುರಿತ ತರಬೇತಿ ನೀಡಲಾಗಿದೆಯಂತೆ. ರಣಜಿ ಆಟಗಾರರಾದ ಕೆ.ಬಿ. ಪವನ್ ಅವರ ಬಳಿ ಕ್ರಿಕೆಟ್ ಆಟದ ಬಗ್ಗೆ ಸಾರಿಕಾ ತರಬೇತಿ ಪಡೆದುಕೊಂಡು ನಂತರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸಿದ ಕರ್ನಾಟಕದ ಮಾಜಿ ಆಟಗಾರರಾದ ಡೇವಿಡ್ ಜಾನ್ಸನ್ ಮತ್ತು ರಘುರಾಮ್ ಭಟ್ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಈ ಸಿನಿಮಾವನ್ನು ಮಂಜೇಶ್ ಭಾಗವತ್ ಅವರು ನಿರ್ದೇಶನ ಮಾಡಿದ್ದಾರೆ. ಕಳೆದ 8 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜೇಶ್ ಭಾಗವತ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಮಾ ಕ್ರಿಯೆಷನ್ಸ್ ಪ್ರಥಮ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಸಹರಾ ಚಿತ್ರಕ್ಕೆ ಮೈಸೂರು, ನಂಜನಗೂಡು, ಬೆಂಗಳೂರು, ಚಿಕ್ಕಮಗಳೂರು, ಮೂಡಿಗೆರೆ, ಸಕಲೇಶಪುರ ಸುತ್ತಮುತ್ತ ಶೇ. 95ರಷ್ಟು ಚಿತ್ರೀಕರಣ ಮಾಡಲಾಗಿದೆ. ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ.

ಉಳಿದಂತೆ, ಪಾತ್ರವರ್ಗದಲ್ಲಿ ಮಂಜುನಾಥ ಹೆಗಡೆ, ಕುರಿ ಸುನಿಲ್, ಅಂಕುಶ್ ರಜತ್, ರಂಜನ್, ಮಂಜುಳಾ ರೆಡ್ಡಿ, ಪ್ರಕಾಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ವಿನ್ಸೆಂಟ್ ಅಂಥೋಣಿ ರೂಥ್ ಅವರು ಛಾಯಾಗ್ರಹಣ ಮಾಡಿದ್ದು, ಸೂರಜ್ ಜೋಯಿಸ್ ಅವರ ಸಂಗೀತ ಸಂಯೋಜನೆ, ಜೇಮ್ಸ್ ಚೇತನ್, ಸಿಂಪಲ್ ಸುನಿ, ರತೀಶ್ ಜಯನ್, ಮಂಜೇಶ್ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಹಾಡುಗಳನ್ನು ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ವ್ಯಾಸರಾಜ್, ನವೀನ್ ಸಜ್ಜು, ಸಿದ್ದಾರ್ಥ, ಸುಪ್ರಿಯಾ ರಾಮ್ ಹಾಡಿದ್ದಾರೆ. ಸಂತೋಷ್ ಅವರ ನೃತ್ಯ ಸಂಯೋಜನೆ ಇದ್ದು, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ.

ಹಿಂದಿನ ಲೇಖನಕಾರು ಅಪಘಾತ: ಮೋದಿ ಸಹೋದರ ಪ್ರಹ್ಲಾದ್ ಮೋದಿ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀಗಳು
ಮುಂದಿನ ಲೇಖನಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಯಾವುದೇ ಚಿಂತನೆ ಇಲ್ಲ: ಸಚಿವ ಡಾ.ಕೆ.ಸುಧಾಕರ್‌