ಮನೆ ಭಾವನಾತ್ಮಕ ಲೇಖನ ಸಮಸ್ಯೆಗಳ ನಡುವೆಯೇ ಸಾಧನೆ ಮಾಡಿ

ಸಮಸ್ಯೆಗಳ ನಡುವೆಯೇ ಸಾಧನೆ ಮಾಡಿ

0

ವಾಯುವಿಹಾರಕ್ಕೆಂದು ಹೊರಟಿದ್ದ ಹಿರಿಯರ ಎದುರಿಗೊಬ್ಬ ತರುಣ ಬಂದ. ಅವನು ಗಾಢವಾಗಿ ಚಿಂತಿಸುತ್ತಿದ್ದ.

ಅವನನ್ನು ನೋಡಿ ಹಿರಿಯರು ‘ಯಾಕೋ ಬಹಳ ಯೋಚನೆಯಲ್ಲಿಇದ್ದಂತಿದೆ?’ ಎಂದು ಪ್ರಶ್ನಿಸಿದರು. ಅದಕ್ಕೆ ಆ ಯುವಕ ‘ವಾತಾವರಣ ಚೆನ್ನಾಗಿದೆ. ಆದರೆ ನನ್ನ ಗ್ರಹಚಾರ ಸರಿಯಿಲ್ಲ. ಮನಸ್ಸಿನಲ್ಲಿಯಾವುದೇ ವಿಚಾರ ಅಥವಾ ತೊಂದರೆ ಇಲ್ಲದಿದ್ದಾಗ ಸಾಧನೆ ಮಾಡಬಹುದು. ನನ್ನ ಪರಿಸ್ಥಿತಿಯಲ್ಲಿ ಸ್ನಾನ, ಸಂಧ್ಯಾವಂದನೆ ಮಾಡಲೂ ಮನಸ್ಸಿಲ್ಲ’ ಎಂದ.

ಆ ಹಿರಿಯರು ನನ್ನ ಜೊತೆಗೆ ಬಾ ಎಂದು ಅವನ ಕೈಹಿಡಿದರು. ಕೆರೆಯ ದಂಡೆಯ ಬಳಿ ಕರೆದುಕೊಂಡು ಬಂದರು.

ಆತನ ಕೈಗೊಂದು ಕಲ್ಲುಕೊಟ್ಟು ಕೆರೆಗೆ ಬಿಸಾಡಲು ಹೇಳಿದರು. ಆ ಯುವಕ ಹಾಗೇ ಮಾಡಿದ. ಕಲ್ಲು ಬಿದ್ದ ಸ್ಥಳದಿಂದ ಪುಟ್ಟ ತರಂಗಗಳು ಹೊರಡಲಾರಂಭಿಸಿದ್ದವು. ಆಗ ಹಿರಿಯರು, ಮಧ್ಯದಿಂದ ಹೊರಟ ತರಂಗಗಳು ದಂಡೆಗೆ ಬರುತ್ತಿವೆಯಾ? ಎಂದು ಪ್ರಶ್ನಿಸಿದರು.

 ಅವನು ಹೌದು ಎಂದ. ಹಾಗಾದರೆ ದಂಡೆಗೆ ಬರುವ ಆ ತರಂಗಗಳನ್ನು ನೀನು ಹೋಗಿ ತಡೆಯುತ್ತಿಯಾ? ಎಂದು ಹಿರಿಯರು ಕೇಳಿದಾಗ, ಅವನು ನೀರಿನಲ್ಲಿಇಳಿದು ತರಂಗಗಳನ್ನು ತಡೆಯುವ ಪ್ರಯತ್ನ ಮಾಡಿದ. ಆದರೆ ಅವನಿಗೆ ತಡೆಯಲು ಆಗಲಿಲ್ಲ. ಅಷ್ಟೇ ಅಲ್ಲ, ಅವನು ನೀರಿನಲ್ಲಿಕೈ ಇಡುವುದರಿಂದ ಇನ್ನೂ ಹೆಚ್ಚು ತರಂಗಗಳು ಹುಟ್ಟಿಕೊಳ್ಳುತ್ತಾ ಇದ್ದವು.

ಈ ದೃಶ್ಯವನ್ನು ತೋರಿಸಿ ಹಿರಿಯರು ಅವನಿಗೆ ತಿಳಿಹೇಳಿದರು. ನೋಡು ಮಗು! ಮನುಷ್ಯನ ಮನಸ್ಸು ಒಂದು ಕೆರೆ ಇದ್ದಂತೆ. ಅದರಲ್ಲಿಸಮಸ್ಯೆ ಎಂಬ ಕಲ್ಲುಬಿದ್ದರೆ ಅದರಿಂದ ಅನೇಕ ತರಂಗಗಳಂತೆ ಒಂದಾದ ಮೇಲೊಂದರಂತೆ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಅದನ್ನು ತಡೆಯಲು ಸಾಧ್ಯವಿಲ್ಲ. ಕೇವಲ ಚಿಂತೆಯಿಂದ ಸಮಸ್ಯೆಗಳು ಇನ್ನೂ ಹೆಚ್ಚುತ್ತವೆ. ನಿಶ್ಚಿಂತರಾಗಿ ಇರಲು ಎಂದಿಗೂ ಸಾಧ್ಯವಿಲ್ಲ. ಚಿಂತೆಗಳ ಮಧ್ಯದಲ್ಲಿಯೇ ನಮ್ಮ ಸಾಧನೆಯನ್ನು ಮಾಡಿಕೊಂಡರೆ ಅವನೇ ಜಾಣ.
ಶ್ರೀ ಸತ್ಯನಿಧಿ ತೀರ್ಥ ಶ್ರೀಪಾದಂಗಳವರು ‘ವೀಚೀಸು ವಿರತಾಸು’ ಎಂಬುದಾಗಿ ಬಹಳ ಸುಂದರವಾದ ದೃಷ್ಟಾಂತವನ್ನು ಈ ವಿಷಯದಲ್ಲಿಕೊಟ್ಟಿದ್ದಾರೆ. ಒಬ್ಬ ವ್ಯಕ್ತಿ ಸಮುದ್ರಸ್ನಾನಕ್ಕೆ ಹೋಗಿದ್ದಾನೆ. ಸ್ನಾನ ಮಾಡಲು ಸಂಕಲ್ಪ ಮಾಡಿದ್ದಾನೆ. ಆದರೆ ಸ್ನಾನ ಮಾಡುತ್ತಿಲ್ಲ. ಏಕೆ? ಎಂದು ಪ್ರಶ್ನಿಸಿದಾಗ, ಈ ಒಂದು ದೊಡ್ಡ ಅಲೆ ಮುಗಿದ ಮೇಲೆ ಮಾಡುತ್ತೇನೆ, ಈ ಅಲೆ ಮುಗಿದ ಮೇಲೆ ಮಾಡುತ್ತೇನೆ ಎಂಬುದಾಗಿ ಅಲೆಗಳನ್ನು ನೋಡುತ್ತಾ ಕುಳಿತ. ಸಮುದ್ರದಲ್ಲಿ ಅಲೆಗಳು ಮುಗಿಯುವ ಹಾಗಿಲ್ಲ, ಇವನ ಸ್ನಾನ ಆಗುವ ಹಾಗಿಲ್ಲ.

ಅಂದಮೇಲೆ ಕೆರೆಯ ತರಂಗಗಳು, ಸಮುದ್ರದ ಅಲೆಗಳು ಇದ್ದಂತೆ ನಮ್ಮ ಮನಸ್ಸಿನ ಸಮಸ್ಯೆಗಳು ನಿರಂತರವಾಗಿ ಬರುತ್ತಲೇ ಇರುತ್ತವೆ. ಎಲ್ಲ ಸಮಸ್ಯೆಗಳನ್ನೂ ನಿವಾರಿಸಿಕೊಂಡು ಆಮೇಲೆ ಸಾಧನೆ ಮಾಡೋಣ ಎನ್ನುವುದು ದಡ್ಡತನ. ಸಮಸ್ಯೆಗಳ ಮಧ್ಯದಲ್ಲಿಯೇ ನಮ್ಮ ಸಾಧನೆ ಆಗಬೇಕು. ಅದು ನಿಜವಾದ ಜಾಣತನ.