ಮನೆ ರಾಜಕೀಯ ಐಎಂಎ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ: ಸಿಎಂ ಬೊಮ್ಮಾಯಿ

ಐಎಂಎ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ: ಸಿಎಂ ಬೊಮ್ಮಾಯಿ

0

ಬೆಂಗಳೂರು: ಐಎಂಎ ಹಗರಣದಲ್ಲಿ ಭಾಗಿಯಾಗಿರುವವರ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲರ ವಿರುದ್ಧವೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಐಎಂಎ ಪ್ರಕರಣದ ಕುರಿತು ಪ್ರಶ್ನೆ ಮಾಡಿದರು. ಐಎಂಎ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಯಾರನ್ನೂ ರಕ್ಷಣೆ ಮಾಡಬಾರದು ಅಂತ ಒತ್ತಾಯ ಮಾಡಿದರು.

ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಯಾರೇ ಪ್ರಕರಣದಲ್ಲಿ ಇದ್ದರೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಂಡಿದ್ದೇವೆ. ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮೇಲೆ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಪ್ರಾಸಿಕ್ಯೂಷನ್ ಗೂ ಅನುಮತಿ ನೀಡಲಾಗಿದೆ. ಅದರ ವಿರುದ್ಧ ಹೇಮಂತ್ ನಿಂಬಾಳ್ಕರ್ ಕೋರ್ಟ್‍ನಿಂದ ಸ್ಟೇ ತಂದಿದ್ದಾರೆ. ಸಿಬಿಐ ತನಿಖೆ ನಡೆಸುತ್ತಿದ್ದು ಸುಪ್ರಿಂ ಕೋರ್ಟ್‍ಗೆ ಹೋಗಿದೆ. ಅಲ್ಲಿಂದ ತೀರ್ಪು ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಮತ್ತೊಬ್ಬ ಐಪಿಎಸ್ ಅಧಿಕಾರಿ ಅಜಯ್ ಹಿಲರಿ ವಿರುದ್ಧವೂ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಈ ಬಗ್ಗೆಯೂ ಸರ್ಕಾರ ಕ್ರಮವಹಿಸಿದೆ. ಯಾರೇ ಹಗರಣದಲ್ಲಿ ಭಾಗಿಯಾಗಿದ್ದರೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗುತ್ತೆ ಅಂತ ಭರವಸೆ ನೀಡಿದರು.

ರಾಜ್ಯ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದಿದ್ದು, ಕೇಂದ್ರದಿಂದ ಪ್ರತಿಕ್ರಿಯೆ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಹಗರಣದಲ್ಲಿ ಭಾಗಿಯಾಗಿರುವ ಐಪಿಎಸ್, ಐಪಿಎಸ್ ಅಲ್ಲದ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.