ಮನೆ ಮನರಂಜನೆ ನಟಿ ಮಾಳವಿಕಾ ಅವಿನಾಶ್ ಜನ್ಮದಿನ: ಅಭಿಮಾನಿಗಳಿಂದ ಶುಭಾಶಯ

ನಟಿ ಮಾಳವಿಕಾ ಅವಿನಾಶ್ ಜನ್ಮದಿನ: ಅಭಿಮಾನಿಗಳಿಂದ ಶುಭಾಶಯ

0

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಮಾಳವಿಕಾ ಅವಿನಾಶ್  46ನೇ ವಸಂತಕ್ಕೆ ಕಾಲಿಟ್ಟಿದ್ದು, ನೆಚ್ಚಿನ ನಟಿಗೆ ಅಭಿಮಾನಿಗಳು, ಗಣ್ಯರು ಶುಭಾಶಯ ತಿಳಿಸಿದ್ದಾರೆ.

ಮಾಳವಿಕಾ ಅವಿನಾಶ್  ಬಾಲ ನಟಿಯಾಗಿ, ನಾಯಕ ನಟಿಯಾಗಿ ಬಳಿಕ ಪೋಷಕ ನಟಿಯಾಗಿ ಅನೇಕ ಸಿನಿಮಾಗಳಲ್ಲಿ ನೆನಪಿನಲ್ಲುಳಿಯುವ ಪಾತ್ರ ಮಾಡಿದವರು ಮಾಳವಿಕಾ. ಕಿರುತೆರೆಯಲ್ಲೂ ತಮ್ಮ ಛಾವು ಮೂಡಿಸಿದವರು.

ಶುಭಾಶಯಗಳ ಮಹಾಪೂರ:   ನಟಿ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿರೋ ಮಾಳವಿಕಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ನಟಿಯರಾದ ಶ್ರುತಿ, ಸುಧಾರಾಣಿ ಸೇರಿದಂತೆ ಚಿತ್ರರಂಗದ ಸ್ನೇಹಿತೆಯರು, ಸಿನಿರಂಗದ ಗಣ್ಯರು, ರಾಜಕಾರಣಿಗಳು, ಬಿಜೆಪಿ ನಾಯಕರು ಹಾರೈಸಿದ್ದಾರೆ. ಜೊತೆಗೆ ಅಭಿಮಾನಿಗಳೂ ಸಹ ತಮ್ಮ ನೆಚ್ಚಿನ ನಟಿಗೆ ಶುಭಾಶಯ ಕೋರಿದ್ದಾರೆ.
ಮಾಳವಿಕಾ ಅವರು 28 ಜನವರಿ 1976 ರಂದು ತಮಿಳು ಮೂಲದ ಕುಟುಂಬದಲ್ಲಿ ಜನಿಸಿದರು. ತಂದೆ ಗಣೇಶನ್ ಬ್ಯಾಂಕ್‌ನಲ್ಲಿ ಕೆಲಸ ಮಾಡ್ತಿದ್ರೆ, ತಾಯಿ ಸಾವಿತ್ರಿ ಗಾಯಕಿ ಮತ್ತು ನೃತ್ಯಗಾರ್ತಿಯಾಗಿದ್ದರು. ಹೀಗಾಗಿ ಕಲೆ, ಸಾಹಿತ್ಯ, ನೃತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಮಾಳವಿಕಾ, ಚಿಕ್ಕ ವಯಸ್ಸಲ್ಲಿ ಕಲೆಯಲ್ಲಿ ಸಾಧನೆ ಮಾಡಿದವರು.
ನಟಿಯ ಹೆಜ್ಜೆ ಗುರುತು:  ಬಾಲನಟಿಯಾಗಿ ಗುರುತಿಸಿಕೊಂಡ ಮಾಳವಿಕಾ ಬಹುಬೇಗನೆ ನಾಯಕಿ ಸ್ಥಾನಕ್ಕೆ ಬಡ್ತಿ ಪಡೆದರು. ರವಿತೇಜ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಿರೋಯಿನ್ ಆದ್ರು. ಬರೀ ಕನ್ನಡ ಸಿನಿಮಾದಲ್ಲಷ್ಟೇ ಅಲ್ಲದೇ, ಮಲಯಾಳಂ, ತಮಿಳು ಸಿನಿಮಾಗಳಲ್ಲೂ ನಾಯಕಿ ಸ್ಥಾನ ಪಡೆದರು. ಅದಾದ ಮೇಲೆ ಸ್ವಲ್ಪ ಸಮಯದ ನಂತರ ಪೋಷಕ ನಟಿಯಾಗಿಯೂ ನಟಿಸಿದರು. ಸೈನೈಡ್, ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ, ಕೆಜೆಎಫ್-1 ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ, ಪಾತ್ರಕ್ಕೆ ಜೀವ ತುಂಬಿದರು.
ಹಿರಿತೆರೆಯಿಂದ ಕಿರುತೆರೆಗೆ ಬಂದ ಮಾಳವಿಕಾ, ಇಲ್ಲಿಯೂ ಸಕ್ರಿಯರಾದರು. ದೂರದರ್ಶನದಲ್ಲಿ ಬಂದ ಮಾಯಾಮೃಗ ಅವರಿಗೆ ಬಹುದೊಡ್ಡ ಹಿಟ್ ತಂದುಕೊಟ್ಟಿತು. ಬಳಿಕ ಕನ್ನಡ, ತಮಿಳು ಹಾಗೂ ಮಲಯಾಳಂನ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲೇ ಮಾಳವಿಕಾ ನಟಿಸಿದರು. ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾಗಲೇ ಅವಿನಾಶ್ ಅವರೊಂದಿಗೆ ಸಪ್ತಪದಿ ತುಳಿದ ಮಾಳವಿಕಾ, ಇದೀಗ ಪತಿ, ಪುತ್ರನ ಜೊತೆ ಸುಖ ಸಂಸಾರ ಸಾಗಿಸುತ್ತಿದ್ದಾರೆ.
ಕನ್ನಡದ ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಕಾರ್ಯಕ್ರಮಕ್ಕೆ ಮಾಳವಿಕಾ ಸಾರಥ್ಯ ವಹಿಸಿದ್ದರು. ಬಳಿಕ ಕಲರ್ಸ್ ಕನ್ನಡದ ಬಿಗ್ ಬಾಸ್-4ರಲ್ಲಿ ಸ್ಪರ್ಧಿಯಾಗಿಯೂ ತಮ್ಮ ನೇರ ನಡೆಯ ಮೂಲಕ ವೀಕ್ಷಕರ ಮೆಚ್ಟುಗೆ ಗಳಿಸಿದರು.
ರಾಜಕಾರಣಿಯಾಗಿ ಮಾಳವಿಕಾ: ಮಾಜಿ ಕೇಂದ್ರ ಸಚಿವೆ, ದಿವಂಗತ ಸುಷ್ಮಾ ಸ್ವರಾಜ್ ಪರ ಬಳ್ಳಾರಿಯಲ್ಲಿ ಪ್ರಚಾರ ಮಾಡುವ ಮೂಲಕ ಮಾಳವಿಕಾ ರಾಜಕೀಯ ಪ್ರವೇಶಿಸಿದರು. ಬಳಿಕ 2013ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಿದರು. ಇದೀಗ ಕರ್ನಾಟಕ ರಾಜ್ಯ ಬಿಜೆಪಿಯ ವಕ್ತಾರೆಯಾಗಿರೋ ಅವರು, ಮಹಿಳಾ ಪರ ಹೋರಾಟಗಳಲ್ಲೂ ಗುರುತಿಸಿಕೊಂಡಿದ್ದಾರೆ.

ಹಿಂದಿನ ಲೇಖನಬೆಂಗಳೂರಿನಲ್ಲಿಯೂ ನಂದಿನಿ ನಕಲಿ ತುಪ್ಪದ ಜಾಲ ಪತ್ತೆ: ಅಧಿಕಾರಿಗಳಿಂದ ಪರಿಶೀಲನೆ
ಮುಂದಿನ ಲೇಖನನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನಿವೇಶನ ಹಂಚಿಕೆ ಆರೋಪ: 6 ಮಂದಿ ಆರೋಪಿಗಳ ಬಂಧನ