ಮನೆ ಸುದ್ದಿ ಜಾಲ ಮೈಸೂರು ನಗರ ಪಾಲಿಕೆಯಿಂದ ಅದಾಲತ್: ವಿವಿಧ ಬೇಡಿಕೆ ಈಡೇರಿಕೆಗೆ ನಿವಾಸಿಗಳ ಮನವಿ ಸಲ್ಲಿಕೆ

ಮೈಸೂರು ನಗರ ಪಾಲಿಕೆಯಿಂದ ಅದಾಲತ್: ವಿವಿಧ ಬೇಡಿಕೆ ಈಡೇರಿಕೆಗೆ ನಿವಾಸಿಗಳ ಮನವಿ ಸಲ್ಲಿಕೆ

0

ಮೈಸೂರು: ನಗರಪಾಲಿಕೆಯಿಂದ ಯಾದವಗಿರಿ ಆಕಾಶವಾಣಿ ವೃತ್ತ ಬಳಿಯ ವಲಯ–4 ಮತ್ತು ಹೆಬ್ಬಾಳು ಬಸವನಗುಡಿ ವೃತ್ತದಲ್ಲಿರುವ ವಲಯ ಕಚೇರಿ–5ರಲ್ಲಿ ಮೇಯರ್‌ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಅದಾಲತ್‌’ನಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ನಿವಾಸಿಗಳು ಮನವಿ ಸಲ್ಲಿಸಿದರು.

ಕುಡಿಯುವ ನೀರಿನ ಬಿಲ್ ಜಾಸ್ತಿ ಬರುತ್ತಿದ್ದು, ಮೀಟರ್ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರೂ ಅಧಿಕಾರಿಗಳು ಮುಂದಾಗುತ್ತಿಲ್ಲ. ಮನೆ ಕಂದಾಯ ಕಟ್ಟಿಸಿಕೊಳ್ಳುವಂತೆ ಅರ್ಜಿ ಸಲ್ಲಿಸಿ ಮೂರು ತಿಂಗಳಾದರೂ ಕಟ್ಟಿಸಿಕೊಂಡಿಲ್ಲ. ಕಟ್ಟಡ ಪೂರ್ಣಗೊಂಡ ವರದಿ ಕೊಡುವುದಕ್ಕೆ ಅಲೆದಾಡಿಸುತ್ತಿದ್ದಾರೆ. ಒಳಚರಂಡಿ ಸಮಸ್ಯೆ ನಿವಾರಣೆಗೆ ದೂರು ನೀಡಿದರೂ ಸ್ಪಂದನೆ ದೊರೆತಿಲ್ಲ ಎಂಬಿತ್ಯಾದಿ ದೂರುಗಳು ನಿವಾಸಿಗಳಿಂದ ಬಂದವು. ಇದು, ವಲಯ ಕಚೇರಿಗಳಲ್ಲಿನ ಕಾರ್ಯವೈಖರಿಯನ್ನು ತೆರೆದಿಟ್ಟಿತು.

ಯಾದವಗಿರಿಯಿಂದ ಬಂಬೂಬಜಾರ್‌’ಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಒಳಚರಂಡಿ ಪೈಪ್‌’ಲೈನ್‌ ಒಡೆದು ಸಮಸ್ಯೆಗಳಾಗುತ್ತಿವೆ. ಹೊಸ ಪೈಪ್‌’ಲೈನ್ ಹಾಕುವಂತೆ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ. ವಿದ್ಯುತ್ ದೀಪಗಳು ಬೆಳಗದೇ ತೊಂದರೆಯಾಗುತ್ತಿದ್ದು, ಕೂಡಲೇ ಸರಿಪಡಿಸಬೇಕು ಎಂದು ನಿವಾಸಿಗಳು ಕೋರಿದರು.

ಇದಕ್ಕೆ ಸ್ಪಂದಿಸಿದ ಮೇಯರ್‌, ಕೂಡಲೇ ವಿದ್ಯುತ್‌ ದೀಪ ಅಳವಡಿಸಬೇಕು. ಯಜಿಡಿಗೆ ಸಂಬಂಧಿಸಿದ ದೂರುಗಳನ್ನು ತಕ್ಷಣ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಿವಾಸಿಗಳ ಅಹವಾಲು ಆಲಿಸಿದ ಮೇಯರ್‌ ಹಾಗೂ ಅಧಿಕಾರಿಗಳು ಸ್ಥಳದಲ್ಲೇ ಹಲವಾರು ಅರ್ಜಿಗಳನ್ನು ಇತ್ಯರ್ಥಪಡಿಸಿದರು.

ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಇತ್ಯರ್ಥಪಡಿಸಲು ಗಮನಹರಿಸಬೇಕು. ಸಿಆರ್‌’ಗೆ ಅರ್ಜಿ ಸಲ್ಲಿಸಿರುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಎಂದು ಹೇಳಿದರು.

ವಲಯ–4ರಲ್ಲಿ ಹೆಚ್ಚಿನ ಜನರು ಸೇರಿದ್ದರು. ಹೀಗಾಗಿ, ಮಧ್ಯಾಹ್ನಕ್ಕೆ ಕೊನೆಯಾಗಬೇಕಿದ್ದ ಅದಾಲತ್‌ ಅನ್ನು ಸಂಜೆ 5ರವರೆಗೆ ನಡೆಸಲಾಯಿತು. ಜನರಿಂದ ಅರ್ಜಿ ಸ್ವೀಕರಿಸಲಾಯಿತು.

ವಲಯ ಕಚೇರಿಗಳಲ್ಲಿ ಸಾರ್ವಜನಿಕರ ಅರ್ಜಿಗಳಿಗೆ ಪರಿಹಾರ ಸಿಗುತ್ತಿಲ್ಲ ಅಥವಾ ವಿಳಂಬವಾಗುತ್ತಿದೆ. ಹೀಗಾಗಿ, ಜನರು ಮುಖ್ಯ ಕಚೇರಿಗೆ ಬರುತ್ತಿದ್ದಾರೆ. ವಲಯ ಕಚೇರಿಗಳಲ್ಲಿ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಸಿಬ್ಬಂದಿ ವಿರುದ್ಧ ದೂರು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಶಿವಕುಮಾರ್ ಎಚ್ಚರಿಕೆ ನೀಡಿದರು.

ಉಪ ಮೇಯರ್ ಡಾ.ಜಿ.ರೂಪಾ ಯೋಗೇಶ್, ಸದಸ್ಯರಾದ ಆರ್.ರವೀಂದ್ರಕುಮಾರ್, ಎಸ್‌ಬಿಎಂ ಮಂಜು, ಭಾಗ್ಯಾ ಮಾದೇಶ್, ಎಂ.ಯು.ಸುಬ್ಬಯ್ಯ, ಪೈಲ್ವಾನ್ ಶ್ರೀನಿವಾಸ್, ಲಕ್ಷ್ಮಿ ಶಿವಣ್ಣ ಇದ್ದರು.

ಹಿಂದಿನ ಲೇಖನರಮೇಶ್ ಜಾರಕಿಹೊಳಿ ತನ್ನ ಅಕ್ರಮ ಮುಚ್ಚಿಕೊಳ್ಳಲು ಡಿಕೆಶಿ ಮೇಲೆ ಆರೋಪ: ಎಂ.ಲಕ್ಷ್ಮಣ್
ಮುಂದಿನ ಲೇಖನವಿದ್ಯಾರ್ಥಿ ಗುಂಪುಗಳ ನಡುವೆ ಜಗಳ: 12ನೇ ತರಗತಿ ವಿದ್ಯಾರ್ಥಿಯ ಎದೆಗೆ ಚಾಕುವಿನಿಂದ ಇರಿದು ಹತ್ಯೆ