ಬೆಂಗಳೂರು(Bengaluru): ಹೆತ್ತವರಿಂದ ಮಗುವನ್ನು ನೇರವಾಗಿ ದತ್ತು ಪಡೆಯುವುದು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 80ರ ಅಡಿ ಅಪರಾಧವಲ್ಲ ಎಂದು ಹೈಕೋರ್ಟ್ ಧಾರವಾಡ ಪೀಠ ತೀರ್ಪು ನೀಡಿದೆ.
ಮಗುವನ್ನು ದತ್ತು ಪಡೆದಿರುವುದನ್ನು ಹಾಗೂ ನೀಡಿರುವುದನ್ನು ಆಕ್ಷೇಪಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಮಗುವಿಗೆ ಜನ್ಮ ನೀಡಿದ ದಂಪತಿ ಹಾಗೂ ದತ್ತು ಪಡೆದ ದಂಪತಿ ಜಂಟಿಯಾಗಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಜನ್ಮ ನೀಡಿದ ಪೋಷಕರಿಂದ ಮಗುವನ್ನು ನೇರವಾಗಿ ದತ್ತು ಪಡೆದುಕೊಳ್ಳುವುದು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ-2015ರ ಸೆಕ್ಷನ್ 80ರ ಅಡಿ ಅಪರಾಧವಲ್ಲ. ಸೆಕ್ಷನ್ 80ರ ಪ್ರಕಾರ ಅನಾಥ, ಪರಿತ್ಯಕ್ತ ಹಾಗೂ ಬಾಲಮಂದಿರಗಳಿಗೆ ಒಪ್ಪಿಸಿರುವ ಮಗುವನ್ನು ದತ್ತು ಪಡೆಯುವ ವೇಳೆ ನಿಯಮಗಳನ್ನು ಅನುಸರಿಸದೇ ಇದ್ದರೆ ಅಪರಾಧವಾಗುತ್ತದೆ. ಈ ವೇಳೆ, ನಿಯಮಗಳನ್ನು ಉಲ್ಲಂಸಿದರೆ ಶಿಕ್ಷೆ ವಿಧಿಸಬಹುದಾಗಿದೆ. ಆದರೆ, ಈ ಪ್ರಕರಣದಲ್ಲಿ ಮಗು ಕಾಯ್ದೆಯ ಸೆಕ್ಷನ್ 2(1), 2(42), 2(60) ರ ಪ್ರಕಾರ ಅನಾಥ, ಪರಿತ್ಯಕ್ತ ಅಥವಾ ಬಾಲಮಂದಿರಕ್ಕೆ ಒಪ್ಪಿಸಿರುವಂತದ್ದಲ್ಲ. ಮಗುವಿನ ಜನ್ಮದಾತರಿಂದಲೇ ನೇರವಾಗಿ ದತ್ತು ಪಡೆದು ಸಾಕುತ್ತಿರುವುದರಿಂದ ಇವರ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿ ಊರ್ಜಿತವಲ್ಲ ಎಂದು ಅಭಿಪ್ರಾಯಪಟ್ಟು, ಗಂಗಾವತಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದ ಪ್ರಕರಣವನ್ನು ರದ್ದುಪಡಿಸಿದೆ.
ಏನಿದು ಪ್ರಕರಣ ?:
ಕೊಪ್ಪಳದ ಗಂಗಾವತಿ ನಿವಾಸಿಗಳಾದ ಮೆಹಬೂಬ್‌ಸಾಬ್ – ಬಾನು ಬೇಗಂ ದಂಪತಿಗೆ 2018ರ ಸೆಪ್ಟೆಂಬರ್ 14ರಂದು ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು. ಈ ವೇಳೆ ಒಂದು ಮಗುವನ್ನು ಮಕ್ಕಳಿರದ ಪರಿಚಿತ ದಂಪತಿ ಜರೀನಾ ಬೇಗಂ-ಅಬ್ದುಲ್ ಸಾಬ್ ಹುಡೇದಮನಿ ಅವರಿಗೆ ದತ್ತು ನೀಡಿದ್ದರು. ಈ ಕುರಿತಂತೆ 20 ರೂಪಾಯಿ ಛಾಪಾ ಕಾಗದದ ಮೇಲೆ ದತ್ತು ವಿವರವನ್ನು ದಾಖಲಿಸಿದ್ದರು. ಆ ಬಳಿಕ ಮಕ್ಕಳ ಕಲ್ಯಾಣ ಇಲಾಖೆ ಮಗುವನ್ನು ಬಾಲ ನ್ಯಾಯ ಕಾಯ್ದೆಯ ನಿಯಮಾನುಸಾರ ದತ್ತು ಪಡೆದಿಲ್ಲ ಮತ್ತು ನೀಡಿಲ್ಲ. ಇದು ಕಾಯ್ದೆಯ ಸೆಕ್ಷನ್ 80ರ ಉಲ್ಲಂಘನೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಂಗಾವತಿ ಅಧಿಕಾರಿ ಆರ್. ಜಯಶ್ರೀ ನರಸಿಂಹ ದೂರು ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಗಂಗಾವತಿಯ ಜೆಎಂಎಫ್ಸಿ ಕೋರ್ಟ್ ದಂಪತಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಕೋರಿ ದತ್ತು ನೀಡಿದ್ದ ಹಾಗೂ ಪಡೆದಿದ್ದ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.














