ಮನೆ ರಾಜಕೀಯ ಶುಕ್ರವಾರದ ಸಭೆ ನಂತರ ಅಂತಿಮ ನಿರ್ಧಾರ: ಸಚಿವ ಡಾ ಕೆ ಸುಧಾಕರ್

ಶುಕ್ರವಾರದ ಸಭೆ ನಂತರ ಅಂತಿಮ ನಿರ್ಧಾರ: ಸಚಿವ ಡಾ ಕೆ ಸುಧಾಕರ್

0

ಬೆಂಗಳೂರು: ಇನ್ನು ಎರಡು ಮೂರು ದಿವಸಗಳಲ್ಲಿ ರಾಜ್ಯದಲ್ಲಿನ ಕೋವಿಡ್ ಸೋಂಕಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದ್ದು, ಶುಕ್ರವಾರ ಮುಖ್ಯಮಂತ್ರಿ ನೇತೃತ್ವದ ಸಭೆಯ ನಂತರ ಸರ್ಕಾರದ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ತಮ್ಮ ನಿವಾಸದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶುಕ್ರವಾರ ಬೆಳಗ್ಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅದರಲ್ಲಿ ಎಲ್ಲ ವರ್ಗದ ಜನರು, ತಜ್ಞರು, ತಾಂತ್ರಿಕ ಸಮಿತಿ ಸಲಹೆಗಾರರು ಎಲ್ಲರೂ ನೀಡಿದ ಅಭಿಪ್ರಾಯಗಳು, ಸಲಹೆಗಳನ್ನು ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೊರೋನಾ ಕರ್ಫ್ಯೂ, ನಿರ್ಬಂಧಗಳ ಬಗ್ಗೆ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಲಿದೆ. ಶುಕ್ರವಾರ ರಾತ್ರಿಯಿಂದ ಸರ್ಕಾರದ ನಿರ್ಧಾರ ಹೊರಬೀಳಲಿದೆ ಎಂದರು.

ಲಸಿಕೆ ಪಡೆಯಿರಿಕೊರೋನಾ ಲಸಿಕೆ ನೀಡಿದರೆ ಸೋಂಕಿನಿಂದ ಯಾವ ರೀತಿ ಬಚಾವಾಗಬಹುದು, ರೋಗ ಉಲ್ಭಣವಾಗದಂತೆ ತಡೆಯಬಹುದು ಎಂದು ನಮಗೆ ಸ್ಪಷ್ಟವಾಗಿ ಗೊತ್ತಾಗಿದೆ, ಲಸಿಕೆ ಪರಿಣಾಮ ಬೀರುತ್ತಿದೆ. ಹಾಗಾಗಿ ಫಲಾನುಭವಿಗಳೆಲ್ಲರೂ ತಪ್ಪದೆ ಕೊರೋನಾ ಸೋಂಕಿಗೆ ಲಸಿಕೆ ಹಾಕಿಸಿಕೊಳ್ಳುವುದು ಅತ್ಯಗತ್ಯ. 15 ವರ್ಷಕ್ಕೆ ಮೇಲ್ಪಟ್ಟ ಮಕ್ಕಳೆಲ್ಲರೂ ತಪ್ಪದೆ ಲಸಿಕೆ ಹಾಕಿಸಿಕೊಳ್ಳಿ ಎಂದು ತಿಳಿಸಿದರು.