ಮೈಸೂರು : ಬಿರು ಬೇಸಿಗೆ ಹಿನ್ನೆಲೆ ‘ಭತ್ತದ ಕಣಜ’ ಕೃಷ್ಣರಾಜನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಜೀವನಾಡಿ ಕಾವೇರಿ ಒಡಲು ಬರಿದಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಕಾಡುವ ಭೀತಿ ಎದುರಾಗಿದೆ. ಈ ಹಿಂದಿನ ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಳೆಯಾಗದಿದ್ದರೂ ಕಾವೇರಿ ಕೊಳ್ಳದಲ್ಲಿ ಒಂದಷ್ಟು ಮಳೆಯಾಗಿ ನದಿಯಲ್ಲಿ ನೀರು ಹರಿದು ಅದನ್ನು ಕಾಲುವೆಗಳ ಮೂಲಕ ಹರಿಸಿ ಈ ಭಾಗದ ರೈತರು ಭತ್ತದ ಬೆಳೆ ಬೆಳೆದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಆದರೆ, ಈ ಬಾರಿ ಕಾವೇರಿ ಕೊಳ್ಳದಲ್ಲೂ ಸಮರ್ಪಕವಾಗಿ ಮಳೆಯಾಗದ ಕಾರಣ ನದಿಯಲ್ಲಿ ನೀರು ಬತ್ತಿದ್ದು, ಎಲ್ಲೆಡೆ ಕಲ್ಲಿನ ಬಂಡೆಗಳೇ ಕಾಣುತ್ತಿವೆ.
ಕೆರೆ-ಕಟ್ಟೆಗಳು ಬತ್ತಿವೆ. ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಲಕ್ಷಣ ಕಾಡುತ್ತಿದೆ. ಕೆರೆ-ಕಟ್ಟೆಗಳು ಬರಿದು: ಕಾವೇರಿ ನದಿಯಲ್ಲಿನೀರು ಹರಿದರೆ ಮಾತ್ರ ಈ ಭಾಗದ ಬಹುತೇಕ ಕೆರೆ-ಕೊಳ್ಳಗಳು ತುಂಬಿ ಅಂತರ್ಜಲ ಮಟ್ಟ ಏರಿಕೆಯಾಗಿ ಜನತೆಗೆ ಕುಡಿಯುವ ನೀರು, ಜಾನುವಾರುಗಳಿಗೆ ನೀರು ಮತ್ತು ಮೇವು ಒದಗಿಸಲು ಸಾಧ್ಯ. ಆದರೆ, ಈ ಬಾರಿ ಮಳೆ ಕೈಕೊಟ್ಟಿರುವ ಕಾರಣ ಅವಳಿ ತಾಲೂಕಿನ ಸುಮಾರು 90ಕ್ಕೂ ಹೆಚ್ಚು ಕೆರೆಗಳು ನೀರಿಲ್ಲದೆ ಬತ್ತಿವೆ.
ಅಂತರ್ಜಲ ಕುಸಿದು ಪಂಪ್ಸೆಟ್ಗಳು ಸ್ಥಗಿತವಾಗಿವೆ. ಪರಿಣಾಮ ಬೆಳೆಗಳು ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಕಾವೇರಿ ನದಿಯಿಂದ ತಾಲೂಕಿನ ಬಹುತೇಕ ಗ್ರಾಮಗಳಿಗೆ ಹಾಗೂ ಕೃಷ್ಣರಾಜನಗರ, ಸಾಲಿಗ್ರಾಮ ಸೇರಿದಂತೆ ಹಲವು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೀಗ ನದಿಯಲ್ಲಿ ನೀರು ಬತ್ತಿರುವ ಕಾರಣ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಕುಡಿಯುವ ನೀರೆತ್ತುವ ಕಡೆ ಹರಿವು ಕಡಿಮೆಯಾಗಿ ನೀರು ಬತ್ತಿರುವುದರಿಂದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದಲ್ಲಿ ಮಳೆಯಾಗದೆ ಹೋದಲ್ಲಿ ಸಾಲಿಗ್ರಾಮ ಮತ್ತು ಕೃಷ್ಣರಾಜನಗರ ತಾಲೂಕಿನ ನೂರಾರು ಗ್ರಾಮಗಳು ಮತ್ತು ಕೃಷ್ಣರಾಜನಗರ ಪಟ್ಟಣಕ್ಕೂ ಕುಡಿಯುವ ನೀರಿನ ಕೊರತೆ ಎದುರಾಗಲಿದೆ.
ಇದಕ್ಕೆ ಸಂಬಂಧಪಟ್ಟ ತಾಲೂಕು ಆಡಳಿತ ಅಕಾರಿಗಳು, ಜನಪ್ರತಿನಿಗಳು ತುರ್ತಾಗಿ ಕ್ರಮ ಕೈಗೊಂಡು ಕ್ಷೇತ್ರದಲ್ಲಿ ತಲೆ ದೋರಿರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜನತೆ ಒತ್ತಾಯಿಸಿದ್ದಾರೆ.















