ಬೆಂಗಳೂರು ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಅಲಿಯಾಸ್ ಜಂಗ್ಲಿ ಬಂಧಿತ ಆರೋಪಿ. ಆತನಿಂದ 1 ಕೋಟಿ 30 ಲಕ್ಷ ರೂಪಾಯಿ ಮೌಲ್ಯದ 885 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದ್ದು, ಬರೋಬ್ಬರಿ 18 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. ಹಗಲು ಕಾರಿನಲ್ಲಿ ನಗರದಾದ್ಯಂತ ಸುತ್ತಾಡುತ್ತಿದ್ದ ಆರೋಪಿ, ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ. ನಂತರ ರಾತ್ರಿ ವೇಳೆ ಆ ಮನೆಗಳ ಕಿಟಕಿಗಳನ್ನು ಕತ್ತರಿಸಿ, ಒಳನುಗ್ಗಿ ಕಳ್ಳತನ ಮಾಡುತ್ತಿದ್ದ. ಆರೋಪಿಯ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 64 ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.
ಇಂದಿರಾನಗರ ಠಾಣೆ ಪೊಲೀಸರು ಕಳ್ಳತನ ಪ್ರಕರಣವೊಂದರ ತನಿಖೆ ನಡೆಸಿದಾಗ ಪ್ರಕಾಶ್‌ನನ್ನ ಬಂಧಿಸಿದ್ದು, ಆತನಿಂದ 8 ಪ್ರಕರಣಗಳಿಗೆ ಸಂಬಂಧಿಸಿದ ಆಭರಣಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಲೀಕನ ಮನೆಯಲ್ಲೇ ಕೈಚಳಕ ತೋರಿದ ದಂಪತಿಗಳ ಬಂಧನ: ಕೆಲಸ ಕೊಟ್ಟು, ಆಶ್ರಯ ನೀಡಿದ್ದ ಮಾಲಿಕನ ಮನೆಯಲ್ಲೇ ಕಳ್ಳತನ ಮಾಡಿದ್ದ ದಂಪತಿಯನ್ನ ಸಿ.ಕೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಹಾಗೂ ಗುತ್ತಿಗೆದಾರ ಮಲ್ಲಿಕಾರ್ಜುನ್ ನಾಯ್ಡು ಎಂಬುವರ ಮನೆಯಲ್ಲಿ ಕೃತ್ಯ ಎಸಗಿದ್ದ ಐಶ್ವರ್ಯಾ (21) ಹಾಗೂ ಮಣಿಕಂಠ (26) ಬಂಧಿತರು. ಆರೋಪಿಗಳಿಂದ 14 ಲಕ್ಷ ರೂ. ನಗದು, 199 ಗ್ರಾಂ ಚಿನ್ನದ ಆಭರಣಗಳು, 730 ಗ್ರಾಂ ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೂವರೆ ವರ್ಷದ ಪುಟ್ಟ ಮಗುವಿದ್ದ ದಂಪತಿಗೆ ಮಲ್ಲಿಕಾರ್ಜುನ್ ನಾಯ್ಡು ಅವರು 4 ತಿಂಗಳುಗಳ ಹಿಂದೆ ಮನೆಯಲ್ಲಿ ಕೆಲಸ ನೀಡಿ ಆಶ್ರಯ ನೀಡಿದ್ದರು ಎಂದು ತಿಳಿದುಬಂದಿದೆ.
ಮಾಲೀಕರ ನಂಬಿಕೆ ಗಳಿಸಿದ್ದ ಆರೋಪಿಗಳು ಹಂತ ಹಂತವಾಗಿ ಮನೆಯಲ್ಲಿದ್ದ ಹಣ ಮತ್ತು ಒಡವೆಗಳನ್ನು ದೋಚುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಂತ ಹಂತವಾಗಿ ನಗದು, ಚಿನ್ನಾಭರಣ ದೋಚಿದ್ದರು. ಎಪ್ರಿಲ್ 25ರಂದು ಮನೆಯಲ್ಲಿದ್ದ ಚಿನ್ನದ ಒಡವೆಗಳು ನಾಪತ್ತೆಯಾದಾಗ ಅನುಮಾನಗೊಂಡ ಮಾಲೀಕ ಮಲ್ಲಿಕಾರ್ಜುನ್ ನಾಯ್ಡು ಈ ಬಗ್ಗೆ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು, ಮನೆಗೆಲಸದ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿತ್ತು. ಪ್ರಸ್ತುತ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ ಎನ್ನಲಾಗಿದೆ.

















