ನವದೆಹಲಿ(New Delhi): ಸೇನಾಪಡೆಗಳಲ್ಲಿನ ನೇಮಕಾತಿಗಾಗಿ ಜಾರಿಗೊಳಿಸಲಾಗಿರುವ ಅಗ್ನಿಪಥ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೂ ಮುನ್ನ ಮೊದಲಿಗೆ ತನ್ನ ವಾದವನ್ನು ಆಲಿಸಬೇಕೆಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಅಹವಾಲು ಸಲ್ಲಿಸಿದೆ. ತನ್ನ ವಾದ ಕೇಳದೆ ತನ್ನ ವಿರುದ್ಧ ಯಾವುದೇ ಆದೇಶ ಹೊರಡಿಸಬಾರದು ಎಂದು ಕೋರಿ ಕೇಂದ್ರವು ಕೇವಿಯಟ್ ಹಾಕಿದೆ.
ಅಗ್ನಿಪಥ ಯೋಜನೆ ಕಾನೂನುಬಾಹಿರ ಹಾಗೂ ಸಂವಿಧಾನ ಬಾಹಿರವಾಗಿದ್ದು, ಯೋಜನೆ ಜಾರಿಯ ಅಧಿಸೂಚನೆಯನ್ನು ರದ್ದುಗೊಳಿಸಬೇಕೆಂದು ಕೋರಿ ವಕೀಲ ಎಂ.ಎಲ್. ಶರ್ಮಾ ಎಂಬುವರು ಸುಪ್ರೀಂಗೆ ಪಿಐಎಲ್ ಸಲ್ಲಿಸಿದ್ದಾರೆ.
ಅಗ್ನಿಪಥ ಯೋಜನೆಯನ್ನು ಮರುಪರಿಶೀಲಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಕೋರಿ ಹರ್ಷ ಅಜಯ್ ಸಿಂಗ್ ಎಂಬ ಮತ್ತೊಬ್ಬ ವಕೀಲರು ಸಹ ಪಿಐಎಲ್ ದಾಖಲಿಸಿದ್ದಾರೆ.
ಅಗ್ನಿಪಥ ಯೋಜನೆಯ ಘೋಷಣೆಯ ನಂತರ ಬಿಹಾರ, ಉತ್ತರ ಪ್ರದೇಶ, ತೆಲಂಗಾಣ, ಹರಿಯಾಣ, ಉತ್ತರಾಖಂಡ, ಪಶ್ಚಿಮ ಬಂಗಾಳ ಮತ್ತು ದೇಶದ ಇನ್ನೂ ಹಲವೆಡೆ ಹಿಂಸಾಚಾರ ಸಂಭವಿಸಿದೆ. ಅಗ್ನಿವೀರರ ಅನಿಶ್ಚಿತ ಭವಿಷ್ಯದ ಕಾರಣದಿಂದ ಈ ಗಲಾಟೆಗಳು ನಡೆದಿವೆ ಎಂದು ವಕೀಲ ಹರ್ಷ ಅಜಯ್ ಸಿಂಗ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಜೂನ್ 24, 2022 ರಿಂದ ಯೋಜನೆ ಜಾರಿಯಾಗದಂತೆ ತಡೆ ನೀಡಬೇಕೆಂದು ಸುಪ್ರೀಂ ಕೋರ್ಟಿಗೆ ಕೋರಿದ್ದಾರೆ.