ಬೆಂಗಳೂರು : ಇದೇ ಮೊದಲ ಬಾರಿ ಭಾರತದ ಆತಿಥ್ಯದಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಪೂರ್ಣ ಪ್ರಮಾಣದಲ್ಲಿ ಆಯೋಜನೆ ಆಗಲಿದೆ. ಇದೇ ವರ್ಷ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಟೂರ್ನಿ ನಡೆಯಲಿದ್ದು, ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಣ ಹೈ-ವೋಲ್ಟೇಜ್ ಪಂದ್ಯಕ್ಕೆ ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಭಾರತದಾದ್ಯಂತ ಒಟ್ಟಾರೆ 13 ಕ್ರೀಡಾಂಗಣಗಳಲ್ಲಿ ವಿಶ್ವಕಪ್ ಟೂರ್ನಿಯ ಪಂದ್ಯಗಳ ಆಯೋಜನೆ ಆಗಲಿವೆ.
ಅಂದಹಾಗೆ ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧಿಕೃತ ಘೋಷಣೆ ಮಾಡುವುದು ಬಾಕಿಯಿದೆ. ಈ ಮಧ್ಯ ಇಂಡಿಯನ್ ಎಕ್ಸ್ಪ್ರೆಸ್ ಮಾಡಿರುವ ವರದಿ ಪ್ರಕಾರ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿವ ಹಾಗೂ ಬರೋಬ್ಬರಿ 1.10 ಲಕ್ಷ ಆಸನ ಸಾಮರ್ಥ್ಯ ಹೊಂದಿರುವ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕ್ ತಂಡಗಳು ಸೆಣಸಾಡಲಿವೆ ಎಂದು ತಿಳಿದು ಬಂದಿದೆ.
ಹೆಚ್ಚು ಪ್ರೇಕ್ಷಕರನ್ನು ಹೊಂದುವ ಗುರಿ
ವರದಿ ಪ್ರಕಾರ ಅಹ್ಮದಾಬಾದ್ ಕ್ರೀಡಾಂಗಣ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದುವ ಸಾಮರ್ಥ್ಯ ಹೊಂದಿದೆ. ಇದೇ ಕಾರಣಕ್ಕೆ ಬಿಸಿಸಿಐ ಈ ಹೈ-ವೋಲ್ಟೇಜ್ ಪಂದ್ಯವನ್ನು ಮೊಟೆರಾದಲ್ಲಿ ಆಯೋಜಿಸಲು ಮುಂದಾಗಿದೆ ಎನ್ನಲಾಗಿದೆ. ಅಂದಹಾಗೆ ಭಾರತ ಮತ್ತು ಪಾಕಿಸ್ತಾನ ನಡುವಣ ಈ ಪಂದ್ಯ ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರೇಕ್ಷಕರು ಬರಲಿದ್ದಾರೆ. ಸಂಪೂರ್ಣ ಕ್ರೀಡಾಂಗಣ ಭರ್ತಿಯಾಗಲಿದೆ ಎಂದೇ ಲೆಕ್ಕಾಚಾರ ಮಾಡಲಾಗಿದೆ. ಹೀಗಾಗಿ ಭಾರತ-ಪಾಕ್ ಪಂದ್ಯಕ್ಕೆ ಬಿಸಿಸಿಐ ಸಹಜವಾಗಿಯೇ ಈ ಕ್ರೀಡಾಂಗಣ ಆಯ್ಕೆ ಮಾಡಿಕೊಳ್ಳಲಿದೆ ಎಂದು ವರದಿ ವಿವರಣೆ ನೀಡಿದೆ.
ಅಕ್ಟೋಬರ್ 5ಕ್ಕೆ ಟೂರ್ನಿ ಶುರುವಾಗುವ ಸಾಧ್ಯತೆ
ಲಭ್ಯವಿರುವ ಮಾಹಿತಿ ಪ್ರಕಾರ ಅಕ್ಟೋಬರ್ 5ರಂದು ಟೂರ್ನಿ ಶುರುವಾಗಲಿದೆ. ಅಹ್ಮದಾಬಾದ್ ಹೊರತಾಗಿ, ಬೆಂಗಳೂರು, ಕೋಲ್ಕತಾ, ನಾಗ್ಪುರ, ತಿರುವನಂತಪುರ, ಮುಂಬೈ, ಡೆಲ್ಲಿ, ಲಖನೌ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ರಾಜ್ಕೋಟ್, ಇಂದೋರ್ ಮತ್ತು ಧರ್ಮಶಾಲಾ ಕ್ರೀಡಾಂಗಣಗಳಲ್ಲಿ ಪಂದ್ಯಗಳ ಆಯೋಜನೆ ಆಗಲಿವೆ. ಒಟ್ಟಾರೆ 13 ಕ್ರೀಡಾಂಗಣಗಳು ವಿಶ್ವಕಪ್ ಪಂದ್ಯಗಳಿಗೆ ವೇದಿಕೆ ಒದಗಿಸಲಿವೆ. ಭಾರತ ತನ್ನ ಪಂದ್ಯಗಳನ್ನು 7 ಕ್ರೀಡಾಂಗಣಗಳಲ್ಲಿ ಆಡಲಿದೆ ಎಂದು ಬೆಳವಣಿಗೆಗೆ ಹತ್ತಿರದ ಮೂಲಗಳು ಹೇಳಿವೆ.
ವರದಿ ಪ್ರಕಾರ ಅಹ್ಮದಾಬಾದ್ ಹೊರತಾಗಿ ಬೇರೆ ಪಂದ್ಯಗಳನ್ನು ಯಾವ ಕ್ರೀಡಾಂಗಣಗಳಲ್ಲಿ ಆಡಲು ಬಯಸುವಿರಿ ಎಂದು ಟೀಮ್ ಮ್ಯಾನೇಜ್ಮೆಂಟ್ಗೆ ಕೇಳಿದೆ. ಮೂಲಗಳ ಪ್ರಕಾರ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಿಗೆ ಸ್ಪಿನ್ ಸ್ನೇಹಿ ಪಿಚ್ ಇರುವ ಕ್ರೀಡಾಂಗಣಗಳನ್ನು ನೀಡುವಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಕೇಳಿಕೊಂಡಿದೆ ಎನ್ನಲಾಗಿದೆ. ತವರಿನಂಗಣದ ಲಾಭ ತೆಗೆದುಕೊಳ್ಳಲು ಟೀಮ್ ಮ್ಯಾನೇಜ್ಮೆಂಟ್ ಸ್ಲೋ-ಪಿಚ್ಗಳನ್ನು ನಿರ್ಮಿಸುವಂತೆ ಮನವಿ ಮಾಡಿದೆ.
ಹೀಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯಕ್ಕೆ ಸ್ಪಿನ್ನರ್ಗಳ ಸ್ವರ್ಗತಾಣ ಚೆಪಾಕ್ನ ಎಂ.ಎ ಚಿದಂಬರಂ ಕ್ರೀಡಾಂಗಣ ಆತಿಥ್ಯ ವಹಿಸಿಕೊಳ್ಳಲಿದೆ ಎನ್ನಲಾಗಿದೆ. ಸ್ಲೋ ಪಿಚ್ ಇರುವ ಕ್ರೀಡಾಂಗಣಗಳಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಎದುರಿನ ಪಂದ್ಯಗಳು ನಡೆಯಲಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ, ಹೀಗಾಗಿ ಹೈ-ವೋಲ್ಟೇಜ್ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ ವಹಿಸುವುದು ಕಷ್ಟವಾಗಿದೆ.